ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯ ಜೊತೆ ವಿಡಿಯೋ ಕಾಲ್ ಮಾಡಿದ ಪ್ರೊಫೆಸರ್ ಒಬ್ಬರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ನಡೆದಿದೆ. ಧಾರವಾಡದ ಪ್ರೊಫೆಸರ್ ಒಬ್ಬರು ಹಣ ಕಳೆದುಕೊಂಡು ದೂರನ್ನು ನೀಡಿದ್ದಾರೆ.
ವಾಟ್ಸ್ಯಾಪ್ನಲ್ಲಿ ಪರಿಚಯವಾದ ಅಂಜಲಿ ಎಂಬ ಯುವತಿ ಜೊತೆ ಚಾಟ್ ಮಾಡುತ್ತಿದ್ದ ಪ್ರೊಫೆಸರ್ ಗೆ ಯುವತಿ ವಿಡಿಯೋ ಕಾಲ್ ಮಾಡಿದ್ದು, ಖಾಸಗಿ ಅಂಗಾಂಗ ತೋರಿಸುವಂತೆ ಪ್ರೊಫೆಸರ್ ಗೆ ಯುವತಿ ಪ್ರಚೋದಿಸಿದ್ದಾಳೆ. ಯುವತಿಯ ತಾಳಕ್ಕೆ ಕುಣಿದ ಪ್ರೊಫೆಸರ್ ಅವರ ಖಾಸಗಿ ಕ್ಷಣದ ವಿಡಿಯೋವನ್ನು ಯುವತಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು ಮಾತ್ರವಲ್ಲದೇ ಪ್ರೊಫೆಸರ್ ಗೆ ಬೆದರಿಕೆ ಹಾಕಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಡುವುದಾಗಿ ಯುವತಿ ಬೆದರಿಕೆ ಹಾಕಿದ್ದಾಳೆ.
ಇದರಿಂದ ಹೆದರಿದ ಪ್ರೊಫೆಸರ್ ಗೆ ಯುವತಿ ರೂ. 3 ಲಕ್ಷ ಬೇಡಿಕೆ ಇಟ್ಟಿದ್ದಳು. ಕೆಲವು ದಿನಗಳ ನಂತರ ವಿಕ್ರಮ್ ಎನ್ನುವ ವ್ಯಕ್ತಿ, ‘ನಾನು ಸೈಬರ್ ಅಧಿಕಾರಿ’ ಎಂದು ಪರಿಚಯಿಸಿಕೊಂಡು ಕರೆ ಮಾಡಿದ್ದಾನೆ. ʼ’ಅಂಜಲಿ ನನಗೆ ಗೊತ್ತು, 5 ಲಕ್ಷ ಹಣ ಕೊಡಿ, ಎಲ್ಲವನ್ನು ಬಗೆಹರಿಸುತ್ತೇನೆ’ ಎಂದು ಪ್ರೊಫೆಸರ್ ಗೆ ಒತ್ತಡ ಹಾಕಿದ್ದಾನೆ ಎನ್ನಲಾಗಿದೆ.
ಹಂತ ಹಂತವಾಗಿ ಪ್ರೊಫೆಸರ್ 21 ಲಕ್ಷ ರೂ. ಹಣವನ್ನು ಪಾವತಿಸಿದ್ದಾರೆ. ಹುಬ್ಬಳ್ಳಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.