ಮೂಡುಬಿದಿರೆ, ಮೇ 7: ‘ಕ್ರೀಡೆ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಳಿಗೆ ‘ಆಳ್ವಾಸ್ ಬ್ರ‍್ಯಾಂಡ್’ ಆಗಿ ಹೊರ ಹೊಮ್ಮುತ್ತಿದೆ ಎಂದು ಅಂತರರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿ ಹೇಳಿದರು. ಇಲ್ಲಿನ ಸ್ವರಾಜ್ ಮೈದಾನದ ಕ್ರೀಡಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿನಿತ್ಯ ನಾವು ಮಾಧ್ಯಮಗಳನ್ನು ನೋಡುವಾಗ, ಅಲ್ಲಿ ‘ಆಳ್ವಾಸ್’ ಹೆಸರು ಇದ್ದೇ ಇರುತ್ತದೆ. ಆಳ್ವಾಸ್ ಸಾಧನೆಯು ಸರ್ವವ್ಯಾಪಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕ್ರೀಡೆ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಶಿಸ್ತು ಬಹುಮುಖ್ಯ. ಕ್ರೀಡೆಯಲ್ಲಿ ಸೋಲು ಎಂಬುವುದೇ ಇಲ್ಲ. ಇಲ್ಲಿ ಗೆಲುವು ಮತ್ತು ಕಲಿಕೆ ಮಾತ್ರ. ಕ್ರೀಡಾ ಸ್ಫೂರ್ತಿ ಇದ್ದಾಗ ಸೋಲಿನ ಆತಂಕವೂ ಬಾಧಿಸುವುದಿಲ್ಲ ಎಂದರು. ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ ನಾಯಕ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಸಂಸ್ಥೆಯ ವಿವಿಧ ಕಾಲೇಜಿನ ಪ್ರಾಂಶುಪಾಲರು ಇದ್ದರು. 26 ತಂಡಗಳಲ್ಲಿ 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಪಾಲ್ಗೊಂಡರು. ಚೆಂಡೆ, ಡೊಳ್ಳು ಹಾಗೂ ಬ್ಯಾಂಡ್ ತಂಡಗಳು ಮೆರುಗು ನೀಡಿದವು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆತ್ಮಾವಲೋಕನ ಹಾಗೂ ಪ್ರತಿಭೆ ಗುರುತಿಸಲು ಸಹಕಾರಿ ಎಂದರು. ಹಿರಿಯ ವಿದ್ಯಾರ್ಥಿ ಶ್ರೇಯಸ್ ಭಟ್, ಉದ್ಯಮಿ ಶ್ರೀಪತಿ ಭಟ್ ಹಾಗೂ ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಇದ್ದರು.
ಮಂಗಳೂರು ವಿಶ್ವವಿದ್ಯಾಲಯ ವಿಭಾಗದಲ್ಲಿ ಬಿಕಾಂ ತಂಡ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ವಿಭಾಗದಲ್ಲಿ ಎಂಎಲ್‌ಟಿ ತಂಡ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಾಗದಲ್ಲಿ ಎಂಬಿಎ ತಂಡಗಳು ಸಮಗ್ರ ಪ್ರಶಸ್ತಿ ಪಡೆದವು.