ವಿದ್ಯಾಗಿರಿ, ಏ. 26: ಸಿಎಯಲ್ಲಿ ಯಶಸ್ಸು ಪಡೆಯಲು ಸುಸ್ಥಿರ, ಸ್ಫೂರ್ತಿದಾಯಕ ಹಾಗೂ ನಿರಂತರ ಅಧ್ಯಯನ ಮುಖ್ಯ ಎಂದು ದೆಹಲಿಯ ಲೆಕ್ಕ ಪರಿಶೋಧಕ ಸಿಎ ರಾಜೀವ್ ಚೋಪ್ರಾ ಹೇಳಿದರು. ಆಳ್ವಾಸ್ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗವು ಬುಧವಾರ ಹಮ್ಮಿಕೊಂಡ ‘ಸಿಎ ಫೌಂಡೇಶನ್ ವಿದ್ಯಾರ್ಥಿಗಳಿಗೆ ಅಭಿನಂದನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಪೋಷಣೆಯ ಜೊತೆಗೆ, ಅವರಿಗೆ ಮಾನಸಿಕ ಒತ್ತಡ ಆಗದಂತೆ ಪೋಷಕರು ಸ್ನೇಹಿತರಂತೆ ಸಹಕರಿಸಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ನಿಮ್ಮ ಕನಸನ್ನು ನನಸು ಮಾಡಲು ದೇವರು 24 ಗಂಟೆ ಕೊಟ್ಟಿದ್ದಾರೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಿ. ತ್ಯಾಗವೇ ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ಇತರ ಆಕರ್ಷಣೆಗಳ ಬಗ್ಗೆ ವ್ಯಾಮೋಹ ಬೇಡ. ತ್ಯಾಗಕ್ಕೆ ಸಿದ್ಧರಾಗಿ ಎಂದರು.
ಈ ಬಾರಿ ಸಿ.ಎ ಫೌಂಡೇಶನ್ ಪರೀಕ್ಷೆಯ ಒಟ್ಟು ಫಲಿತಾಂಶವು ಶೇ 29.25 ಬಂದಿದ್ದರೆ, ನಮ್ಮ ಕಾಲೇಜು ಶೇ 75.78 ಫಲಿತಾಂಶ ದಾಖಲಿಸಿದೆ. 238 ವಿದ್ಯಾರ್ಥಿಗಳು ಜೂನ್‌ನಲ್ಲಿ ಸಿಎ ಫೌಂಡೇಶನ್ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಇದೊಂದು ಅನನ್ಯ ಸಾಧನೆ. ಅವರಿಗೆ ಬೇಕಾದ ಅತ್ಯುನ್ನತ ತರಬೇತುದಾರರನ್ನು ಕರೆಯಿಸಿಕೊಳ್ಳಲು ಆಳ್ವಾಸ್ ಸಿದ್ಧವಾಗಿದೆ ಎಂದರು. ಸಿಎಗಳು ದೇಶದ ಆರ್ಥಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಿಎಗಳ ಪಾತ್ರ ಪ್ರಮುಖವಾಗಿದೆ. ಅವರು ಆರ್ಥಿಕ ಕಾವಲುಗಾರರೂ ಆಗಿದ್ದಾರೆ ಎಂದರು. ಮಕ್ಕಳನ್ನು ವೃತ್ತಿಪರರನ್ನಾಗಿ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡಲು ಸಾಧ್ಯ ಎಂದರು.
ಕಾಲೇಜಿನ 97 ವಿದ್ಯಾರ್ಥಿಗಳು ಈ ಬಾರಿ ಸಿಎ ಫೌಂಡೇಶನ್ ಪರೀಕ್ಷೆ ತೇರ್ಗಡೆಯಾಗಿದ್ದು, ಅವರನ್ನು ಅಭಿನಂದಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿದರು. ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಎಂ.ಡಿ., ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ್ ಕೆ.ಜಿ., ಹಾಗೂ ಸಿಎ ಫೌಂಡೇಶನ್ ಹಾಗೂ ಸಿಎ ಇಂಟರಮಿಡಿಯೇಟ್‌ನ ಸಂಯೋಜಕ ಅನಂತಶಯನ ಇದ್ದರು. ಅಪರ್ಣಾ ಕೆ. ಸ್ವಾಗತಿಸಿ, ಪ್ರತೀಕ್ಷಾ ವಂದಿಸಿದರು. ಸಿಂಚನಾ ಶೆಟ್ಟಿ ನಿರೂಪಿಸಿದರು.