ಜಯಪುರ, (ಕೊಪ್ಪ) ಏ. 26: ಅಗಳಗಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎತ್ತಿನಟ್ಟಿ ಪ್ರದೇಶದಲ್ಲಿ 14-15ನೇ ಶತಮಾನಕ್ಕೆ ಸೇರಿದ ಶಾಸನೋಕ್ತ ವೀರಗಲ್ಲನ್ನು ಎತ್ತನಟ್ಟಿಯ ಸ್ಥಳೀಯ ಮಕ್ಕಳು ಪತ್ತೆ ಮಾಡಿದ್ದು, ವೀರಗಲ್ಲಿನ ಹೆಚ್ಚಿನ ಅಧ್ಯಯನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಅವರು ಮಾಡಿರುತ್ತಾರೆ.
ಪ್ರಸ್ತುತ ಮೂರು ಪಟ್ಟಿಕೆಗಳನ್ನು ಒಳಗೊಂಡಿರುವ ವೀರಗಲ್ಲಿನ ಕೆಳಗಿನ ಎರಡು ಪಟ್ಟಿಕೆಗಳು ಭಗ್ನಗೊಂಡಿದೆ. ಕೆಳಗಿನ ಪಟ್ಟಿಕೆಯಲ್ಲಿನ ಶಿಲ್ಪಗಳ ಆಧಾರದ ಮೇಲೆ ಅಪ್ಸರೆಯರು ವೀರನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ಚಿತ್ರಣವಿದ್ದು, ಎರಡನೇ ಪಟ್ಟಿಕೆ ವಿಶೇಷತೆಯಿಂದ ಕೂಡಿದ್ದು ಸ್ವರ್ಗದಲ್ಲಿರುವ ವೀರನನ್ನು ಪೂಜಿಸುತ್ತಿರುವಂತೆ ಕೆತ್ತನೆಯನ್ನು ಮಾಡಿರಬಹುದು ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡನೆಯ ಪಟ್ಟಿಕೆಯಲ್ಲಿರುವ ವೀರ ಮತ್ತು ಮತ್ತೋರ್ವ ವ್ಯಕ್ತಿಯನ್ನು ಪೀಠದಲ್ಲಿ ಕುಳಿತಿರುವಂತೆ ಕೆತ್ತಲಾಗಿದ್ದು, ಪಕ್ಕದಲ್ಲಿ ಸ್ತ್ರಿ-ಪುರುಷರ ವಿಗ್ರಹವಿದೆ.
ಮೇಲಿನ ಪಟ್ಟಿಕೆಯಲ್ಲಿ ಪದ್ಮಾಸನದಲ್ಲಿ ಪೀಠದ ಮೇಲೆ ಕುಳಿತಿರುವ ವಿಗ್ರಹಕ್ಕೆ ಗಜಗಳು ಅಭಿಷೇಕ ಮಾಡುತ್ತಿರುವ ಉಬ್ಬು ಶಿಲ್ಪ ಕಾಣಬಹುದಾಗಿದೆ. ಈ ವೀರಗಲ್ಲಿನ ಮೊದಲ ಮತ್ತು ಎರಡನೇ ಪಟ್ಟಿಕೆಯಲ್ಲಿ ಕನ್ನಡ ಲಿಪಿ ಮತ್ತು ಭಾಷೆಯ ಶಾಸನವಿದ್ದು, ಬಹುತೇಕ ಅಕ್ಷರಗಳು ತ್ರುಟಿತಗೊಂಡಿವೆ. ಅಳಿದುಳಿದ ಅಕ್ಷರಗಳ ಆಧಾರದ ಮೇಲೆ ಶಾಸನವು 14-15 ನೇ ಶತಮಾನಕ್ಕೆ ಸೇರಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
“ಕ್ಷೇತ್ರಕಾರ್ಯದಲ್ಲಿಯೂ ಸ್ಥಳೀಯ ಮಕ್ಕಳು ಸಹಕಾರ ನೀಡಿದ್ದು, ಈ ಸ್ಮಾರಕ ಶಿಲ್ಪವನ್ನು ಪತ್ತೆ ಮಾಡಿದ ಮಕ್ಕಳ ಕಾರ್ಯ ಅಭಿನಂದನೀಯವಾಗಿದ್ದು, ಇತಿಹಾಸವನ್ನು ಉಳಿಸಿ, ರಕ್ಷಿಸಿಕೊಂಡು ಹೋಗುವಲ್ಲಿ ಇಂತಹ ಮಕ್ಕಳ ಪಾತ್ರ ಬಹುಮುಖ್ಯವಾಗಿದೆ” ಎಂದು ಮಕ್ಕಳ ಶೋಧನಕಾರ್ಯಕ್ಕೆ ಸಂಶೋಧಕರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.