ಧರ್ಮಸ್ಥಳ, ಏ. 23: ಭಾವೀ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಜಾಗತಿಕ ಧಾರ್ಮಿಕ ಬೃಹತ್ ಸಂಕಲ್ಪ ‘ಕೋಟಿ ಗೀತಾ ಲೇಖನ ಯಜ್ಞ’ದ ನೋಂದಣಿ ಅಭಿಯಾನ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆರಂಭಗೊಂಡಿದೆ.
ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರಿಗೆ ಕೋಟಿ ಗೀತಾ ಲೇಖನ ಯಜ್ಞದ ಹೊತ್ತಗೆಗಳನ್ನು ನೀಡುವ ಮೂಲಕ ಯಜ್ಞ ದೀಕ್ಷೆಯಿತ್ತು ಪ್ರಥಮ ನೋಂದಣಿ ಮಾಡಿಸಿದರು. ತಮ್ಮ ಚತುರ್ಥ ಪರ್ಯಾಯದ ಪ್ರಧಾನ ಯೋಜನೆಯಾಗಿ ಪುತ್ತಿಗೆ ಶ್ರೀಪಾದರು ಈ ಬೃಹತ್ ಸಂಕಲ್ಪವನ್ನು ಮಾಡಿದ್ದು, ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಬರೆಯುವ ಮೂಲಕ ತಮ್ಮ ಬೌದ್ಧಿಕ ಸ್ತರವನ್ನು ವಿಸ್ತಾರ ಮಾಡಿಕೊಳ್ಳಬಹುದಾಗಿದೆ ಎಂದವರು ಶುಭ ಹಾರೈಸಿದರು.
ಮಡಿಕೇರಿ, ಅಮ್ಮತ್ತಿ, ಶಿವಮೊಗ್ಗ, ಕುಶಾಲನಗರಗಳ ಆಯ್ದ ಯಜ್ಞಕರ್ತರಿಗೆ ಖಾವಂದರು ಪುಸ್ತಕಗಳನ್ನಿತ್ತು ಅಶೀರ್ವದಿಸಿದರು. ಶ್ರೀ ಮಠದ ದಿವಾನರಾದ ನಾಗರಾಜ ಆಚಾರ್ಯ, ಸಂಕರ್ಷಣ ಪ್ರಖಂಡದ ಪ್ರಚಾರಕ ಕೆ.ವಿ. ರಮಣಾಚಾರ್ಯ, ಪ್ರದ್ಯುಮ್ನ ಪ್ರಖಂಡದ ಪ್ರಚಾರಕ ರಮೇಶ್ ಭಟ್, ಅಂತರ್ಯಾಮಿಯ ನಂದನ್ ದಳವಾಯಿ, ಪ್ರಮೋದ್ ಸಾಗರ್ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರದ ವಸಂತ ಮಹಲ್‍ನಲ್ಲಿ ಕೇಂದ್ರವು ಕಾರ್ಯಾಚರಿಸಲಿದ್ದು ನಿಗದಿತ ದಿನ ಮತ್ತು ಅವಧಿಗಳಲ್ಲಿ ಗೀತೆ ಬರೆಯುವ ಪುಸ್ತಕಗಳನ್ನು ವಿತರಿಸಿ, ಯಜ್ಞದೀಕ್ಷೆ ನೀಡಲಾಗುವುದು. ಸ್ವಯಂ ಸೇವಕರಾಗುವವರು ಮತ್ತು ಹೆಚ್ಚಿನ ಮಾಹಿತಿಗಾಗಿ 8792158946 ನ್ನು ಸಂಪರ್ಕಿಸಬಹುದು ಎಂದು ಕೋಟಿ ಗೀತಾ ಲೇಖನ ಯಜ್ಞ ಸಮಿತಿಯು ಪ್ರಕಟಿಸಿದೆ.