ತುಮಕೂರು, ಏ. 13: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಮೊದಲ ಮತ್ತು ಎರಡನೆಯ ಪಟ್ಟಿ ಬಿಡುಗಡೆ ಮಾಡಿದೆ. ಹಲವಾರು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಟಿಕೆಟ್ ಸಿಗದ ಹಾಲಿ ಶಾಸಕರನ್ನು ಮತ್ತು ಟಿಕೆಟ್ ಆಕಾಂಕ್ಷಿಗಳಾಗಿದ್ದವರನ್ನು ಅಭಿಮಾನಿಗಳು ಪಕ್ಷೇತರರಾಗಿ ಸ್ಪರ್ಧಿಸಿ ಎಂದು ಒತ್ತಡ ಹಾಕುತ್ತಿರುವ ಬೆನ್ನಲ್ಲೇ ತುಮಕೂರಿನ ಬಿಜೆಪಿಯ ಪ್ರಭಾವಿ ಮುಖಂಡ ಮಾಜಿ ಸಚಿವ ಸೊಗಡು ಶಿವಣ್ಣ ಟಿಕೆಟ್ ಕೈತಪ್ಪಿದಕ್ಕೆ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಬೆಂಬಲಿಗರ ಜೊತೆಗೆ ಮಹತ್ವದ ಸಭೆಯನ್ನು ನಡೆಸಿದ ಬಳಿಕ ಬೆಂಬಲಿಗರು ಪಕ್ಷಕ್ಕೆ ರಾಜೀನಾಮೆ ನೀಡುವಂತೆ ಸಲಹೆ ಮಾಡಿದ ಹಿನ್ನಲೆಯಲ್ಲಿ, ಬೆಂಬಲಿಗರ ಸಭೆಯಲ್ಲೇ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಸೊಗಡು ಶಿವಣ್ಣ ಘೋಷಣೆ ಮಾಡಿದರು.
ಟಿಕೆಟ್ ಕೈತಪ್ಪಿದಕ್ಕೆ ಚಿಕ್ಕಮಗಳೂರಿನ ಬಿಜೆಪಿ ಪ್ರಭಾವಿ ಮುಖಂಡ ಎಂ.ಪಿ. ಕುಮಾರಸ್ವಾಮಿ ಕೂಡ ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಒಂದೆಡೆ ಟಿಕೆಟ್ ಸಿಗದಿದಕ್ಕೆ ಬೇಸರವಿಲ್ಲ, ಆದರೆ ಪಕ್ಷ ನಡೆದುಕೊಂಡ ರೀತಿ ಸರಿಯಾಗಿಲ್ಲ. ಟಿಕೆಟ್ ಯಾವ ಕಾರಣಕ್ಕೆ ನೀಡಲಿಲ್ಲ ಎಂಬ ವಿಚಾರ ಈ ಮೊದಲೇ ನನ್ನ ಗಮನಕ್ಕೆ ತರಬೇಕಿತ್ತು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರೆ, ಮತ್ತೊಂದೆಡೆ ಸುಳ್ಯದ ಟಿಕೆಟ್ ಸಿಗದೇ ಇದ್ದಕ್ಕೆ ಸಚಿವ ಅಂಗಾರ ತೀವ್ರ ಅಸಮಾಧಾನಗೊಂಡಿದ್ದು, ಪಕ್ಷದ ನಡೆಯಿಂದ ಬೇಸರವಾಗಿದೆ. ಯಾವುದೇ ಲಾಬಿ ನಡೆಸದ ನನಗೆ ಯಾವ ಕಾರಣಕ್ಕಾಗಿ ಟಿಕೆಟ್ ನೀಡಿಲ್ಲ ಎಂದು ಸೌಜನ್ಯಕ್ಕಾದರೂ ಪಕ್ಷದಿಂದ ನನಗೆ ಸಂದೇಶ ಬಂದಿಲ್ಲ. ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಿಲ್ಲ, ಸಕ್ರಿಯ ರಾಜಕೀಯದಿಂದ ದೂರ ಉಳಿಯುವೆ ಎಂದು ಅಂಗಾರ ಹೇಳಿದ್ದಾರೆ.