ಮಂಗಳೂರು, ಮಾ. 29: ಇಲ್ಲಿನ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ರಾಜ್ಯ ಮಟ್ಟದ ಅಂತರ ಕಾಲೇಜು ತಾಂತ್ರಿಕ ಸಾಂಸ್ಕೃತಿಕ ಉತ್ಸವ ಆಕೃತಿ-2023 ಕಾಲೇಜಿನ ಆವರಣದಲ್ಲಿ ಮಾ. 30 ರಿಂದ ಎ.1 ರವರೆಗೆ ವಿವಿಧ ತಾಂತ್ರಿಕ, ಸಾಂಸ್ಕೃತಿಕ ಸ್ಪರ್ಧೆ, ಪ್ರದರ್ಶನಗಳೊಂದಿಗೆ ನಡೆಯಲಿದೆ. ಯುವ ಜನತೆಯ ಪ್ರತಿಭೆ, ಸೃಜನಶೀಲತೆಗೆ ವೇದಿಕೆಯಾಗಿರುವ ಮೂರು ದಿನಗಳ ಈ ತಾಂತ್ರಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಆಟೋಟಗಳ ಉತ್ಸವದಲ್ಲಿ ರಾಜ್ಯವ್ಯಾಪಿ ಕಾಲೇಜುಗಳ ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಸುಮಾರು 50ಕ್ಕೂ ಅಧಿಕ ಆಕರ್ಷಕ ಸ್ಪರ್ಧಾ ಕಾರ್ಯಕ್ರಮಗಳಿದ್ದು ಪ್ರತಿಭಾನ್ವಿತ, ಯುವ ಕಲಾವಿದರ ಸಂಗಮಕ್ಕೆ ಆಕೃತಿ ವೇದಿಕೆಯಾಗಲಿದೆ.
ಮೆಘಾ ಪ್ರೈಮ್, ಪ್ರೈಮ್, ನಾನ್ಪ್ರೈಮ್ ಹೀಗೆ ವಿವಿಧ ವಿಭಾಗಗಳಲ್ಲಿ ಯುವ ವಿದ್ಯಾರ್ಥಿಗಳ ಪ್ರತಿಭೆ, ಕೌಶಲ ಪ್ರದರ್ಶನಕ್ಕೆ ಅವಕಾಶವಿದ್ದು ಜತೆಗೆ ಶಾರ್ಕ್ ಟ್ಯಾಂಕ್, ಬ್ಯಾಟಲ್ ಆಫ್ ಬ್ಯಾಂಡ್ಸ್, ವೈಬ್,ಮೆರಾಕಿ, ಐಡಿಯಾಥಾನ್, ಗಲ್ಲಿ ಕ್ರಿಕೆಟ್, ಸ್ಮ್ಯಾಶ್ಇಟ್, ಮೊದಲಾದ ಆಕರ್ಷಕ ಸ್ಪರ್ಧೆಗಳ ಜತೆಗೆ ವೈವಿಧ್ಯಮಯ ಕಾರುಗಳ ಅಟೋ ಎಕ್ಸಪೋ, ಫಿಟ್ನೆಸ್ ರಂಗದ ಝುಂಬಾ ಪ್ರದರ್ಶನವಿದೆ. ಆಕೃತಿಯ ಮೂರು ದಿನಗಳಲ್ಲೂ ಸಂಜೆ ಹೆಸರಾಂತ ಕಲಾವಿದರಾದ ಅಭಿನವ್ ಶೇಖರ್, ಜ್ಯಾಮರ್, ಡಿಜೆ ರೆವೇಟರ್ ಅವರ ಬಳಗದಿಂದ ಪ್ರೊನೈಟ್ ಪ್ರದರ್ಶನವಿದೆ.
ರಾಜ್ಯಮಟ್ಟದ ಈ ಅಂತರ ಕಾಲೇಜು ಉತ್ಸವಕ್ಕೆ ಕಾಲೇಜಿನ ಆವರಣವನ್ನು ಆಕರ್ಷಕವಾಗಿ ಸಜ್ಜುಗೊಳಿಸಲಾಗುತ್ತಿದ್ದು ಯುವ ಪ್ರತಿಭಾನ್ವಿತ ವಿದ್ಯಾರ್ಥಿಗಳ ಈ ಕಲೋತ್ಸವದಲ್ಲಿ ಈ ಬಾರಿ ಹೆಚ್ಚಿನ ರಂಗೇರಿದ್ದು ಅಬ್ಬರದ ಪ್ರದರ್ಶನಕ್ಕೆ ಸಕಲ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.