ಬೆಳಗಾವಿ, ಮಾ. 22: ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು 9 ವರ್ಷವಾಗುತ್ತಾ ಬಂದಿದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದು 4 ವರ್ಷ ತುಂಬುತ್ತಾ ಬಂದಿದೆ. ರಾಜ್ಯ ಬಿಜೆಪಿ ನಾಯಕರು ತಮ್ಮದು ಡಬ್ಬಲ್ ಇಂಜಿನ್ ಸರ್ಕಾರ ಎಂದು ಬಡಾಯಿ ಕೊಚ್ಚಿಕೊಂಡರು. ಕಳೆದ 9 ವರ್ಷದಲ್ಲಿ ದೇಶದ ಯುವ ಜನರಿಗೆ ನೀವು ಏನು ಮಾಡಿದ್ದೀರಿ? ಇಂದು ಮೋದಿ ಅವರು ಓಟಿಗಾಗಿ ಮೇಲಿಂದ ಮೇಲೆ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಪಾಕಿಸ್ತಾನ, ಚೀನಾ, ಹಿಂದುತ್ವ ಎಂದು ಹೇಳಿ ಜನರ ಮತ ಪಡೆದು ಅಧಿಕಾರಕ್ಕೆ ಬಂದ ನಂತರ ಮೋದಿ ಅವರು ಸಂಪೂರ್ಣವಾಗಿ ಯುವ ಜನರನ್ನು ಮರೆತಿದ್ದಾರೆ. 2014ರಲ್ಲಿ ಈ ದೇಶದ ಯುವಜನರಿಗೆ ಪ್ರತೀ ವರ್ಷ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದು ಅವರು ಹೇಳಿದ್ದರು, ಆದರೆ ಇದಕ್ಕೂ ಹೆಚ್ಚಿನ ಸಂಖ್ಯೆಯ ಉದ್ಯೋಗಗಳು ನಷ್ಟವಾಗಿದೆ. ಕೇಂದ್ರ ಸರ್ಕಾರದ ತಲೆಬುಡವಿಲ್ಲದ ಆರ್ಥಿಕ ನೀತಿಗಳಿಂದಾಗಿ ಲಕ್ಷಾಂತರ ಎಂ,ಎಸ್,ಎಂ,ಇ ಗಳು ಮುಚ್ಚಿಹೋದವು. ಇದರಿಂದ ಇಲ್ಲಿ ಉದ್ಯೋಗಗಳು ಸಿಗುವುದು ಕಷ್ಟವಾಯಿತು. ದೇಶದ 12,89,000 ಯುವ ಜನರು ಹೊರದೇಶದಲ್ಲಿ ಉದ್ಯೋಗ ಹುಡುಕಿಕೊಂಡು ಹೋಗಿದ್ದಾರೆ, ಈ ರೀತಿ ಪ್ರತಿಭಾ ಪಲಾಯನಕ್ಕೆ ನಿಮ್ಮ ಬಳಿ ಉತ್ತರವಿದೆಯಾ ಮೋದಿಜೀ?
ಮೋದಿ ಅವರು ರಾಜ್ಯಕ್ಕೆ ಬಂದಾಗ ಸಿರುದ್ಯೋಗ, ಭ್ರಷ್ಟಾಚಾರ, ರೈತರು, ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ, ಕೇವಲ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪ ಮಾಡಿ ಜನರ ದಾರಿ ತಪ್ಪಿಸಲು ಹೊರಟಿದ್ದೀರಿ, ಇದರಿಂದ ನಿಮಗೆ ಯಾವ ಪ್ರಯೋಜನವೂ ಆಗಲ್ಲ ಮೋದಿಜೀ. ಇಂದು ಹಣದ ಮೂಲಕ ಚುನಾವಣೆ ಗೆಲ್ಲಬೇಕು ಎಂದು ಬಿಜೆಪಿಯವರು ಹೊರಟಿದ್ದಾರೆ. ಬಿಜೆಪಿ ಬಂದ ಮೇಲೆ ಉದ್ಯೋಗ ಸೃಷ್ಟಿ ನಿಂತು ಹೋಗಿದೆ. ಮತ್ತೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಆಗಬೇಕಾದರೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಹೊಸ ಶಿಕ್ಷಣ ನೀತಿಯ ಮೂಲಕ ಅವೈಜ್ಞಾನಿಕ, ವೈಚಾರಿಕವಲ್ಲದ ಶಿಕ್ಷಣ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಅಪಾಯದಲ್ಲಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.