ವಿದ್ಯಾಗಿರಿ, ಮಾ. 3: ನಾವೆಲ್ಲಾ ಅಕ್ಷರ ಜ್ಞಾನವುಳ್ಳವರು. ಆದರೆ ಕೇವಲ ಅಕ್ಷರ ಜ್ಞಾನ ಇದ್ದರೆ ಸಾಕಾಗುವುದಿಲ್ಲ. ಅಕ್ಷರ ಜ್ಞಾನ ಇಲ್ಲದವರೂ ಹಣಕಾಸು ಸಾಕ್ಷರತೆ ಹೊಂದಿರುವುದು ಮುಖ್ಯ ಎಂದು ಮಂಗಳೂರಿನ ಹಣಕಾಸು ಸಾಕ್ಷರತೆಯ ಸಮಾಲೋಚಕ ಲತೇಶ್ ಬಿ ಹೇಳಿದರು. ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗದ ಸ್ಪಟಿಕ ವೇದಿಕೆ ಅಡಿಯಲ್ಲಿ ನಡೆದ ಹಣಕಾಸು ಸಾಕ್ಷರತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ವಿಮೆ, ಪಿಂಚಣಿ, ಸರ್ಕಾರದ ಅನೇಕ ಸೌಲಭ್ಯಗಳು, ಹಣಕಾಸಿನ ವ್ಯವಹಾರಗಳು ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ. ಡಿಜಿಟಲ್ ಬ್ಯಾಂಕಿಂಗ್ ಇಂದಿನ ಅನಿವಾರ್ಯ. ಗೂಗಲ್ ಪೇ, ಫೋನ್ ಪೇ, ಪೆಟಿಎಮ್ ಮೂಲಕ ಜನರು ಸುಲಭವಾಗಿ ವ್ಯವಹಾರ ಮಾಡಬಹುದು. ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಮಾನ್ಯತೆ ಹೊಂದಿರುವ ಬ್ಯಾಂಕುಗಳಲ್ಲಿ ಮಾತ್ರ ನಿಮ್ಮ ಹಣದ ವ್ಯವಹಾರ ಇರಲಿ ಎಂದು ಅವರು ಸಲಹೆ ನೀಡಿದರು.
ಉನ್ನತ ಶಿಕ್ಷಣಕ್ಕೆ, ಕೃಷಿ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆಗಳನ್ನು, ಜಾರಿಗೆ ತರುತ್ತಿದೆ. ಅವೆಲ್ಲವುಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ವಿಭಾಗದ ಮುಖ್ಯಸ್ಥೆ ಡಾ. ಮಧುಮಲಾ ಕೆ. ಇದ್ದರು. ಅನ್ವಿತಾ ಜೈನ್ ಸ್ವಾಗತಿಸಿ, ಉತ್ತಮಕುಮಾರ್ ವಂದಿಸಿದರು. ಅರ್ಪಿತಾ ಜೈನ್ ನಿರೂಪಿಸಿದರು.