ಮಂಗಳೂರು, ಫೆ. 11: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳ ಮತ್ತು ತಾಲೂಕು ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಚಿಣ್ಣರ ಕಲರವ ಸಾಂಸ್ಕೃತಿಕ ಕಾರ್ಯಕ್ರಮ ಮಂಗಳೂರಿನ ಕದ್ರಿ ಬಾಲಭವನದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ ಮಾತನಾಡಿ, ಮಕ್ಕಳ ಮಾನಸಿಕ ಹಾಗೂ ಭೌತಿಕ ಬೆಳವಣಿಗೆಗೆ ಅವರು ಇರುವಂತೆ ಅವರನ್ನು ಬಿಟ್ಟು ಬಿಡಬೇಕು. ಅವರು ಸಂತೋಷವನ್ನು ಪೂರ್ಣವಾಗಿ ಅನುಭವಿಸುವಂತೆ ಪಾಲಕರು ಪೋಷಕರು ನೋಡಿಕೊಳ್ಳಬೇಕು. ಮಕ್ಕಳನ್ನು ಚೌಕಟ್ಟಿನೊಳಗಿಟ್ಡು ಬೆಳೆಸುವ ಬದಲು ಬಾಲ್ಯವನ್ನು ಸ್ವಚ್ಛಂದವಾಗಿರಿಸಬೇಕು. ಮಕ್ಕಳ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಗುರುತಿಸಿ ಗೌರವಿಸುವ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯ ಸ್ತುತ್ಯಾರ್ಹ ಹಾಗೆಯೇ ಇದೀಗ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸ್ಥಾಪನೆ ಮಾಡುವ ಮೂಲಕ ಮಕ್ಕಳ ಬೆಳವಣಿಗೆಗೆ ಇದು ಹೆಚ್ಚು ಸಹಾಯಕವಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಉಪನ್ಯಾಸಕ ಎಸ್ ಪಿ ಅಜಿತ್ ಪ್ರಸಾದ್ ಮಾತನಾಡಿ, ಮಕ್ಕಳನ್ನು ಅಂಕದ ಹಿಂದೋಡಿಸದೇ ತಮ್ಮ ಬುದ್ಧಿ ಚತುರತೆಯನ್ನು ಅಂಕೆಯಲ್ಲಿ ಇಟ್ಟುಕೊಳ್ಳುವಂತಹ ಮಾನಸಿಕ ವಿಕಸನಕ್ಕೆ ಹಿರಿಯರು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆ ಪರಿಮಳ ಮಹೇಶ್ ರಾವ್ ಸ್ವಾಗತಿಸಿ ಪ್ರಸ್ತಾವನೆಗೈದರು. ಜಿಲ್ಲಾ ಪದಾಧಿಕಾರಿಗಳಾದ ಸುಮಂಗಳಾ ದಿನೇಶ್ ಶೆಟ್ಟಿ, ರಶ್ಮಿ ಸನಿಲ್, ಅಮರ್‌ನಾಥ್ ಪೂಪಾಡಿಕಲ್ಲು, ಗೋಪಾಲಕೃಷ್ಣ ಶಾಸ್ತ್ರಿ ಇವರನ್ನು ಪರಿಚಯಿಸಲಾಯಿತು.
ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಉಳ್ಳಾಲ ತಾಲೂಕು ಘಟಕಗಳ ಅಧ್ಯಕ್ಷರುಗಳಾದ ಶಿವಪ್ರಸಾದ್ ಕೊಕ್ಕಡ, ಶ್ರೀಕಲಾ ಕಾರಂತ್, ಸುಭಾಷಿಣಿ ಹಾಗೂ ಸಿಹಾನ ಬಿ.ಎಂ ಇವರಿಗೆ ನೇಮಕಾತಿ ಆದೇಶ ಪತ್ರದೊಂದಿಗೆ, ಪ್ರಮಾಣ ವಚನವನ್ನು ಎಸ್.ಎಸ್.ಸಿ.ಡಿ.ಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ ಬೋಧಿಸಿದರು. ನೂತನ ಅಧ್ಯಕ್ಷೆ ಪರಿಮಳಾ ಮಹೇಶ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಎಸ್.ಎ.ಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಕ.ರಾ.ಮ.ಸಾ.ಪ ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಉಪಸ್ಥಿತರಿದ್ದರು.
ಕ.ರಾ.ಮ.ಸಾ.ಪ ನ ದ.ಕ ಜಿಲ್ಲಾ ಘಟಕ ಉಪಾಧ್ಯಕ್ಷೆ ಸುಮಂಗಲಾ ಡಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಶ್ಮಿ ಸನಿಲ್ ವಂದಿಸಿದರು. ಬಳಿಕ ವಿವಿಧ ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ, ಚಿಣ್ಣರ ಕಲರವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಪ್ರಮಾಣ ಪತ್ರದೊಂದಿಗೆ, ಕಿರು ಹೊತ್ತಗೆಗಳನ್ನು ವಿತರಿಸಲಾಯಿತು.