ವಿದ್ಯಾಗಿರಿ, ಫೆ. 10: ಎನ್‌ಸಿಸಿ ಎಂಬುದು ಕೇವಲ ಸಮವಸ್ತ್ರಕ್ಕೆ ಸೀಮಿತವಲ್ಲ. ಅದು ವಿದ್ಯಾರ್ಥಿ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎನ್‌ಸಿಸಿ ಅಭಿನಂದನಾ ದಿನಾಚರಣೆಯ ಸಮಾರೋಪದಲ್ಲಿ ಅವರು ಮಾತನಾಡಿದರು.
ಸಮವಸ್ತ್ರ ಧರಿಸಿದಾಗ ಮಾತ್ರ ಶಿಸ್ತನ್ನು ಪಾಲಿಸುವುದಲ್ಲ. ಬದುಕಿನಲ್ಲಿ ಶಿಸ್ತು ರೂಪಿಸಿಕೊಂಡಾಗ ವ್ಯಕ್ತಿತ್ವ ಬೆಳೆಯುತ್ತದೆ. ನಮ್ಮ ಬಾಲ್ಯದಲ್ಲಿ ಎನ್‌ಸಿಸಿ ಕೆಡೆಟ್ ಆಗಿ ಶಿಬಿರದಲ್ಲಿ ಪಾಲ್ಗೊಂಡಿರುವುದನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಅದು ಬದುಕಿನ ಪಾಠವಾಗಿದೆ ಎಂದು ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟರು. ಪರೋಪಕಾರವನ್ನು ಎನ್‌ಸಿಸಿಯಲ್ಲಿ ಕಲಿಯಲು ಸಾಧ್ಯ. ಎನ್‌ಸಿಸಿ ಕೆಡೆಟ್‌ಗಳನ್ನು ನೋಡಿ ಇತರ ವಿದ್ಯಾರ್ಥಿಗಳು ಶಿಸ್ತು ಕಲಿಯಲಿ ಎಂಬ ಉದ್ದೇಶದಿಂದ ಆಳ್ವಾಸ್ ಕಾರ್ಯಕ್ರಮಗಳಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು. ವಿದ್ಯಾರ್ಥಿಗಳು ಯಾವುದೇ ಶಿಬಿರದಲ್ಲಿ ಪಾಲ್ಗೊಂಡಾಗ ಬದುಕಿನ ಪಾಠಗಳನ್ನು ಕಲಿತುಕೊಳ್ಳಬೇಕು. ಕೇವಲ ಪ್ರಮಾಣಪತ್ರಕ್ಕಾಗಿ ಶಿಬಿರದಲ್ಲಿ ಕಾಲ ಕಳೆಯಬಾರದು ಎಂದರು.
ಎನ್‌ಸಿಸಿ ಕೆಡೆಟ್‌ಗಳಾದ ವೈಷ್ಣವಿ, ವಾತ್ಸಲ್ಯ, ಕೃಷ್ಣ, ಕವಿನ್ ನೇಪಾಳ್ ಅನಿಸಿಕೆ ಹಂಚಿಕೊಂಡರು. ಕೆಡೆಟ್‌ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಳ್ವಾಸ್ ಶಾಲೆಗಳ ಆಡಳಿತಾಧಿಕಾರಿ ಪ್ರೀತಂ ಕುಂದರ್, ಸಹಾಯಕ ಆಡಳಿತಾಧಿಕಾರಿ ರಾಜೇಶ್ ಶೆಟ್ಟಿ, ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿಜಯಾ ಟಿ. ಮೂರ್ತಿ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಉಮಾ ರುಫೂಸ್, ಆಳ್ವಾಸ್ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲ ಮೊಹಮ್ಮದ್ ಶಫಿ ಕೆ. ಶೇಖ್, ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿ. ಪ್ರಶಾಂತ್, ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶ್ರೀನಿಧಿ ಯಳಚಿತ್ತಾಯ, ವಿದ್ಯಾರ್ಥಿ ನಿಲಯದ ಜಗನ್ನಾಥ ಇದ್ದರು. ಶಿಕ್ಷಕ ಪ್ರವೀಣ್ ಸ್ವಾಗತಿಸಿ, ಹೇಮಸ್ವಿ ವಂದಿಸಿದರು. ವಿದ್ಯಾರ್ಥಿನಿ ಗೋಪಿಕಾ ನಿರೂಪಿಸಿದರು.