ಚೆನ್ನಪಟ್ಟಣ: ಸರ್ಕಾರಿ ಶಾಲೆಯ ಸಬಲೀಕರಣದಲ್ಲಿ ಶಿಕ್ಷಕರು, ಪೋಷಕರು ಹಾಗೂ ಸಮುದಾಯದ ಪಾತ್ರ ಬಹಳ ಮಹತ್ವದ್ದು ಎಂದು ಶಿಕ್ಷಣ ಸಂಯೋಜಕ ಚಕ್ಕೆರೆ ಯೋಗೇಶ್ ತಿಳಿಸಿದರು. ತಾಲ್ಲೂಕಿನ ಮತ್ತಿಕೆರೆ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ, ಮಂಗಳೂರಿನ ಪಡಿ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಭಾಗಿತ್ವದಲ್ಲಿ ಜಿಲ್ಲಾಮಟ್ಟದ ಶಿಕ್ಷಣ ಹಕ್ಕು ಕಾಯ್ದೆ 2009 ರ ಕುರಿತು ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಕ್ಕಳು ಶಾಲೆಯಿಂದ ಹೊರಗೆ ಉಳಿಯದಂತೆ ಸೂಕ್ತ ಮುತುವರ್ಜಿ ವಹಿಸಬೇಕು. ಶಿಕ್ಷಕರು ಮತ್ತು ಎಸ್.ಡಿ. ಎಂ.ಸಿ.ಗಳ ಸಮನ್ವಯತೆಯಿಂದ ಹಲವಾರು ಶಾಲೆಗಳು ವಿಶೇಷ ಪ್ರಗತಿ ಸಾಧಿಸಿವೆ ಎಂದರು.
ಶಿಕ್ಷಣ ಸಂಯೋಜಕಿ ರಾಜಲಕ್ಷ್ಮಿ ಮಾತನಾಡಿ, ಸ್ಥಳೀಯ ಶಾಲೆಗಳನ್ನು ಸ್ಥಳೀಯರೇ ಬೆಳೆಸಬೇಕು. ಸ್ಥಳೀಯ ಸಮುದಾಯದ ಸಹಕಾರದಿಂದ ಮಾತ್ರವೇ ಸರ್ಕಾರಿ ಶಾಲೆಗಳು ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತವೆ ಎಂದರು.
ಪಡಿ ಸಂಸ್ಥೆಯ ತರಬೇತಿ ಸಂಯೋಜಕ ವಿವೇಕ್ ಮಾತನಾಡಿ, ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳ ಕೇಂದ್ರಿತ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಾಧಾರಿತ ವ್ಯವಸ್ಥೆ ರೂಪುಗೊಳ್ಳಲು ಶಿಕ್ಷಕ ಮತ್ತು ಸಮಾಜ ಒಳಗೊಳ್ಳಬೇಕು ಎಂದರು.
ಸಿ.ಆರ್.ಪಿಗಳಾದ ಮುತ್ತಯ್ಯ, ಚಂದ್ರಿಕಾ, ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ವಿಜಯ್ ರಾಂಪುರ, ಮುಖಂಡ ಗಂಗರಾಜು ಮಾತನಾಡಿದರು. ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕಿ ಶಶಿಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಡಿ ಸಂಸ್ಥೆಯ ಜಿಲ್ಲಾ ಸುಗಮಕಾರ ಅಬ್ಬೂರು ಶ್ರೀನಿವಾಸ್, ಮುಖ್ಯ ತರಬೇತುದಾರರಾದ ಸುಕನ್ಯಾ, ಯಶೋದ, ಭಾಗ್ಯಮ್ಮ, ಮತ್ತೀಕೆರೆ ಕ್ಲಸ್ಟರ್ ನ ಮುಖ್ಯ ಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಜರಿದ್ದರು.