ಕಾರವಾರ: ಡೀಡ್ಸ್ ಮಂಗಳೂರು, ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉತ್ತರ ಕನ್ನಡ, ಕಾರವಾರ ಪೂರಕ ಕಾನೂನು ಸುಗಮಕಾರರ ಸಮುಚ್ಚಯ ಸಹಭಾಗಿತ್ವದಲ್ಲಿ ‘ಮಹಿಳೆಯರಿಗಿರುವ ನ್ಯಾಯ ವ್ಯವಸ್ಥೆಗಳು’ ಸಮಾಲೋಚನಾ ಸಭೆ ನಡೆಯಿತು. ಮಹಿಳೆಯರ ಸಬಲೀಕರಣ ಕಾನೂನು ಸೇವಾ ಪ್ರಾಧಿಕಾರದ ಧ್ಯೇಯವಾಗಿದೆ. ಮಹಿಳೆಯರಲ್ಲಿ, ಜನಸಾಮಾನ್ಯರಲ್ಲಿ ಅಗತ್ಯ ಕಾನೂನುಗಳ ಹೆಚ್ಚಿನ ತಿಳಿವಳಿಕೆ ಇಲ್ಲ. ಈ ತಿಳಿವಳಿಕೆಯನ್ನು ನಮ್ಮ ಪ್ರಾಧಿಕಾರ ನೀಡುತ್ತಿದ್ದರೂ ಇನ್ನೂ ವ್ಯಾಪಕ ಅರಿವಿನ ಅಗತ್ಯವಿದೆ.
ಅರ್ಹರಿಗೆ ಉಚಿತ ಸಲಹೆ, ಉಚಿತವಾಗಿ ವಕೀಲರನ್ನು ಒದಗಿಸುವುದು, ನ್ಯಾಯಾಲಯ ಶುಲ್ಕಗಳನ್ನು ಕಾನೂನು ಸೇವಾ ಪ್ರಾಧಿಕಾರದಿಂದ ಒದಗಿಸಲಾಗುತ್ತದೆ. ನ್ಯಾಯಾಲಯಕ್ಕೆ ದಾಖಲಾದ ಕೌಟುಂಬಿಕ ಹಿಂಸೆಯ ಪ್ರಕರಣಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ಎಲ್ಲಾ ರೀತಿಯ ಪರಿಹಾರವನ್ನು ಪಡೆಯಲು ಮಹಿಳೆಯರು ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾರವಾರದ ಕೆಡಿಡಿಸಿ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಡೀಡ್ಸ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ತುಕಾರಾಮ ಎಕ್ಕಾರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಸಂಸ್ಥೆಯು ಹೆಣ್ಣು ಗಂಡು ಸಮಾನತೆ, ಮಹಿಳಾ ಕಾನೂನುಗಳ ಅರಿವು, ಮಹಿಳಾ ಪ್ರಕರಣಗಳ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿ ರಾಜ್ಯದ 8 ಜಿಲ್ಲೆಗಳಲ್ಲಿ ಪ್ಯಾರಾಲೀಗಲ್ ಕೋರ್ಸನ್ನು ನಡೆಸಿರುತ್ತದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ನೀಡಲು ಪೊಲಿಸ್ ಇಲಾಖೆ, ರಕ್ಷಣಾಧಿಕಾರಿ, ಸಾಂತ್ವನ, ಸ್ವಾಧಾರ, ಸಖಿ, ಕಾನೂನು ಸೇವಾ ಪ್ರಾಧಿಕಾರದಂತಹ ವ್ಯವಸ್ಥೆಗಳಿದ್ದು ಅವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ, ಜತೆಗೆ ಸ್ವಯಂ ಸೇವಾ ಸಂಸ್ಥೆಗಳೂ ಕೆಲಸ ಮಾಡುತ್ತಿವೆ.
ಇವರೆಲ್ಲಾ ಒಟ್ಟಿಗೆ ಸೇರಿ ತಮ್ಮ ಉತ್ತಮ ಕೆಲಸಗಳು, ಸವಾಲುಗಳನ್ನು ಒಂದೆಡೆ ಸೇರಿ ಚರ್ಚಿಸುತ್ತಾ ಇನ್ನೂ ಉತ್ತಮೀಕರಿಸಿಕೊಳ್ಳಲು ಸಲಹೆ, ಯೋಜನೆಗಳನ್ನು ನಡೆಸಬೇಕೆನ್ನುವ ಉದ್ದೇಶದೊಂದಿಗೆ ಇಂತಹ ಸಭೆಯನ್ನು
ಆಯೋಜಿಸಲಾಗಿದೆಯೆಂದರು.
ಕಾನೂನು ಸೇವಾ ಪ್ರಾಧಿಕಾರದ ಪಾನೆಲ್ ವಕೀಲರಾದ ವರದಾ ಡಿ ನಾಯ್ಕ, ಕವಿತಾ ನಾಯ್ಕ ಕೌಟುಂಬಿಕ ದೌರ್ಜನ್ಯ, ಪೋಕ್ಸೊ, ಆಸ್ತಿ ಹಕ್ಕಿಗೆ ಸಂಬಂಧಿಸಿದ ಭಾಗಾರ್ಥಿಗಳ ಪ್ರಶ್ನೆಗಳಿಗೆ ಮಾಹಿತಿ ನೀಡಿದರು. ಮಹಿಳಾ ಪೊಲಿಸ್ ಅಧಿಕಾರಿಗಳಾದ ಸಾರಿಕ ಮತ್ತು ಮಿಲಿನ್ ಮಾಹಿತಿ ನೀಡುತ್ತಾ ಠಾಣೆಗೆ ಮಹಿಳಾ ದೌರ್ಜನ್ಯದ ದೂರುಗಳು ಬಂದಾಗ ಗಂಡ ಹೆಂಡತಿ, ಅವರ ಮನೆಯವರೊಂದಿಗೆ ಚರ್ಚಿಸಿ ಇತ್ಯರ್ಥಪಡಿಸುತ್ತೇವೆ. ಸಾಂತ್ವನ, ಸಖಿ, ಪ್ರಾಧಿಕಾರಕ್ಕೂ ಪ್ರಕರಣ ವರ್ಗಾಯಿಸುತ್ತೇವೆ ಎಂದರು.
ಸಾಂತ್ವನ ಕೇಂದ್ರದ ವಿನುತಾರವರು ಮಾತನಾಡುತ್ತಾ ಕೇಂದ್ರಕ್ಕೆ ಬಂದ ಪ್ರಕರಣಗಳನ್ನು ಹೆಚ್ಚಾಗಿ ರಾಜಿ ಸಂಧಾನ ಮೂಲಕ ಮಾಡುತ್ತೇವೆ. ಕೆಲವೊಂದು ಪ್ರಕರಣಗಳನ್ನು ಸಖಿ, ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳುಹಿಸುತ್ತೇವೆ. ಅಗತ್ಯವಿರುವ ಮಹಿಳೆಯರಿಗೆ ತಾತ್ಕಾಲಿಕ ವಸತಿ, ಸ್ವ ಉದ್ಯೋಗ ತರಬೇತಿಗಳನ್ನು ನೀಡುತ್ತೇವೆ ಎಂದರು.
ಸಖಿ ಕೇಂದ್ರದ ಆಡಳಿತಾಧಿಕಾರಿ ಮಂಜುಳಾ ಪಾಟೀಲ್ ಮತ್ತು ವಕೀಲರಾದ ಧನಲಕ್ಷ್ಮಿ ಸಖಿ ಕೇಂದ್ರದ ಮಾಹಿತಿ ನೀಡುತ್ತಾ ಭಾಗಾರ್ಥಿಗಳ ಪ್ರಶ್ನೆಗಳಿಗೆ ಮಾಹಿತಿ ನೀಡಿದರು. ಅಧಿಕಾರಿಗಳಿಗೆ, ಸಂಸ್ಥೆಗಳಿಗೆ, ಜನರಿಗೆ ಲಿಂಗತ್ವ-ಮಹಿಳಾ ಕಾನೂನುಗಳ ತರಬೇತಿಯನ್ನು ಪೂರಕ ಇಲಾಖೆಗಳು ನಿರಂತರವಾಗಿ ನಡೆಸುವುದು, ಮಹಿಳೆಯರಿಗೆ ಪೂರಕವಾದ ನ್ಯಾಯ ವ್ಯವಸ್ಥೆಗಳು ಮತ್ತು ಇಲಾಖೆಗಳು ಮಾನವೀಯತೆಯಿಂದ, ಲಿಂಗಸೂಕ್ಷ್ಮತೆಯಿಂದ, ನ್ಯಾಯಪರವಾಗಿ ಮತ್ತು ಶೀಘ್ರವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು, ಸಾಧ್ಯವಾದರೆ ಸ್ಥಳೀಯವಾಗಿಯೇ ಮಹಿಳಾಪರವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು, ಮಹಿಳೆಯರಿಗೆ ಪೂರಕವಾದ ಇಲಾಖೆಗಳು ಮತ್ತು ಸಂಸ್ಥೆಗಳು ಒಟ್ಟು ಸೇರಿ ಇಂತಹ ಸಮಾಲೋಚನಾ ಸಭೆಗಳನ್ನು ನಡೆಸಬೇಕು ಮುಂತಾದ ಸಲಹೆಗಳು ಬಂದವು.
ಪೂರಕ ಕಾನೂನು ಸುಗಮಕಾರರ ಸಮುಚ್ಚಯದ ಅಧ್ಯಕ್ಷೆ ಹೇಮಲತಾ ತಾಂಡೇಲ್ ಮತ್ತು ಡೀಡ್ಸ್ ವಕಾಲತ್ತು ಅಧಿಕಾರಿ ಖುಶಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಪೂರಕ ಕಾನೂನು ಸುಗಮಕಾರರ ಸಮುಚ್ಚಯದ ಉಪ ಕಾರ್ಯದರ್ಶಿ ಸ್ವಾತಿ ಸ್ವಾಗತಿಸಿ, ಗೀತಾ ಸಾಳಸ್ಕರ್ ವಂದಿಸಿದರು.