ಹುಬ್ಬಳ್ಳಿ, ಏ. 16: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪಕ್ಷದ ಶಿಸ್ತಿನ ಸಿಪಾಯಿ, ಯಾವುದೇ ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಶೆಟ್ಟರ್ ಅವರ ಮನವೊಲಿಸಲು ಶನಿವಾರ ರಾತ್ರಿ ಬಿಜೆಪಿ ಮುಖಂಡರು ಆಗಮಿಸಿದ್ದರು. ಆದರೆ ಸಂಧಾನ ಮಾತುಕತೆ ವಿಫಲಗೊಂಡ ಕಾರಣ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ನನ್ನ ಬಗ್ಗೆ ನಿರಂತರವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಯಾವುದೇ ಆರೋಪಗಳಿಲ್ಲದ ನನಗೆ ಈ ಬಾರಿ ಟಿಕೆಟ್ ನೀಡದಿರುವುದು ಬೇಸರ ತಂದಿದೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಚುನಾವಣಾ ಫಲಿತಾಂಶದ ಮೂಲಕ ತಕ್ಕ ಉತ್ತರ ನೀಡುತ್ತೇನೆ. ನನಗೆ ಟಿಕೆಟ್ ನಿರಾಕರಿಸಿದ್ದರಿಂದ ಕನಿಷ್ಠ 20-25 ಸ್ಥಾನಗಳ ಮೇಲೆ ಪರಿಣಾಮ ಬೀರಲಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
‘ಕೆಲವು ಮಂದಿ’ ತಮ್ಮ ವಯಕ್ತಿಕ ಹಿತಾಸಕ್ತಿಗಳಿಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ಬರುವುದನ್ನು ತಡೆಯಲು ಮುಂದಾಗಿದ್ದಾರೆ. ‘ಇಂತಹ ವ್ಯಕ್ತಿಗಳ’ ಹಸ್ತಕ್ಷೇಪದಿಂದ ಬಿಜೆಪಿ ಪಕ್ಷಕ್ಕೆ ಬಹಳ ನಷ್ಟ ಉಂಟಾಗುವುದು ಖಚಿತ ಎಂದು ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್ ಮತ್ತು ಕೆಲವರ ಹೆಸರು ಉಲ್ಲೇಖಿಸದೇ ಜಗದೀಶ್ ಶೆಟ್ಟರ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಬಿಜೆಪಿಗೆ ಟಿಕೆಟ್ ಘೋಷಣೆ ಮುಳುವಾಯಿತೇ?: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ನಂತರ ಬಿಜೆಪಿಯ ಟಿಕೆಟ್ ಸಿಗದ ಹಿರಿಯ ಮುಖಂಡರು, ಪ್ರಭಾವಿ ನಾಯಕರು ಸಾಲು ಸಾಲಾಗಿ ಬಿಜೆಪಿಗೆ ಗುಡ್ ಬೈ ಹೇಳುತ್ತಿರುವುದು ಬಿಜೆಪಿಗೆ ಕೆಲವು ಕ್ಷೇತ್ರಗಳಲ್ಲಿ ಹಿನ್ನಡೆಯಾಗುವ ಎಲ್ಲಾ ಸಾಧ್ಯತೆಗಳಿವೆ. ವಿರೋಧ ಪಕ್ಷಗಳು ಬಿಜೆಪಿಯನ್ನು ಹಲವು ವಿಚಾರಗಳ ಆಧಾರದಲ್ಲಿ ಟಾರ್ಗೆಟ್ ಮಾಡುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ಈ ಬಾರಿ ನಡೆಸಿದ ಪ್ರಯೋಗ ಯಾವ ಫಲಿತಾಂಶ ನೀಡಲಿದೆ ಎಂದು ಕಾದುನೋಡಬೇಕು.