ಉಡುಪಿ, ಡಿ.26: ರಾಜ್ಯ ಸರ್ಕಾರದ 5 ನೇ ‘ಗ್ಯಾರಂಟಿ’ ಭರವಸೆ ‘ಯುವನಿಧಿಗೆ’ ಡಿಸೆಂಬರ್ 26 ರಿಂದ ನೋಂದಣಿ ಆರಂಭವಾಗಲಿದೆ. 2023-24ನೇ ಸಾಲಿನಲ್ಲಿ ಯಾವುದೇ ವೃತ್ತಿ ಪರ ಕೋರ್ಸ್, ಪದವಿ, ಡಿಪ್ಲೋಮಾ ಉತ್ತೀರ್ಣರಾಗಿ, 6 ತಿಂಗಳಲ್ಲಿ ಉದ್ಯೋಗ ಸಿಗದವರಿಗೆ ಈ ಯೋಜನೆ ಅನ್ವಯವಾಗಲಿದೆ. ಮುಂದಿನ 24 ತಿಂಗಳು ಪದವೀದರರಿಗೆ ಮಾಸಿಕ ರೂ.3000/-, ಡಿಪ್ಲೋಮಾ ಮುಗಿಸಿದವರಿಗೆ ಮಾಸಿಕ ರೂ.1500/- ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.
ಉದ್ಯೋಗ ಸಿಕ್ಕಿದ ಕೂಡಲೇ ಈ ಸೌಲಭ್ಯ ಸ್ಥಗಿತಗೊಳ್ಳಲಿದೆ. ಅರ್ಜಿ ಸಲ್ಲಿಸಲು ಮಾನದಂಡಗಳು
ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗ ಅಭ್ಯರ್ಥಿಗಳಿಗೆ ಮಾತ್ರ.ವಾಸವಿರುವ ವಿದ್ಯಾರ್ಥಿ ಎಂದರೆ ಕರ್ನಾಟಕದಲ್ಲಿ ಕನಿಷ್ಟ 6 ವರ್ಷಗಳವರೆಗೆ ಪದವಿ/ಡಿಪ್ಲೋಮಾದವರೆಗೆ ಅಧ್ಯಯನ ಮಾಡಿದವರು. 6 ವರ್ಷಗಳ ವಾಸವಿರುವುದನ್ನು ಈ ಕೆಳಗಿನಂತೆ ಪರಿಶೀಲಿಸಲಾಗುತ್ತದೆ. ಎಸ್.ಎಸ್.ಎಲ್‌ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ/ಅಂಕಪಟ್ಟಿಗಳು ಅಥವಾ ಎಸ್.ಎಸ್.ಎಲ್‌ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಡಿಪ್ಲೋಮಾ ಪ್ರಮಾಣ ಪತ್ರ/ಅಂಕಪಟ್ಟಿ ಅಥವಾ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ನೋಂದಣಿ ಸಂಖ್ಯೆ ಮತ್ತು ಪದವಿ ಪ್ರಮಾಣ ಪತ್ರ ಅಥವಾ ಪಡಿತರ ಚೀಟಿ ನೀಡಿದ ದಿನಾಂಕ ಮತ್ತು ಪದವಿ ಪ್ರಮಾಣ ಪತ್ರ NIOS( National Institute of Open Schooling) ನೀಡಿದ S.S.L.C ಅಂಕಪಟ್ಟಿಯನ್ನೂ ಸಹ ವಾಸ ಸ್ಥಳ ಪರಿಶೀಲನೆಗಾಗಿ ಪರಿಗಣಿಸುವುದು. ಅಭ್ಯರ್ಥಿಯ ಪದವಿ/ಡಿಪ್ಲೋಮಾ ಹೊಂದಿರುವ ಸ್ಥಿತಿಯ ಬಗ್ಗೆ ಪರಿಶೀಲಿಸಲು National Academic Depository (NAD) ಯಲ್ಲಿ ಅಪ್ಲೋಡ್ ಮಾಡಲಾದ ಅಭ್ಯರ್ಥಿಗಳ ಪದವಿ/ಡಿಪ್ಲೋಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪದವಿ/ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದು.
ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ಮೊದಲು ಡಿಜಿಲಾಕರ್ ನಲ್ಲಿ ಡಿಜಿಲಾಕರ್ ಖಾತೆಯನ್ನು ಸೃಜಿಸುವ ಮೂಲಕ ತಮ್ಮ National Academic Depository (NAD) ಪ್ರಮಾಣ ಪತ್ರವನ್ನು ಪಡೆದಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. 2023ರ ವರ್ಷದಲ್ಲಿ ತೇರ್ಗಡೆಯಾಗಿದ್ದು, ಉತ್ತೀರ್ಣರಾಗಿ 180 ದಿನಗಳು ಕಳೆದರೂ ಉದ್ಯೋಗ ಲಭಿಸದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ದಿನದಿಂದ ಉದ್ಯೋಗ ಸಿಗುವವರೆಗೆ ಮಾತ್ರ ಅಥವಾ 2 ವರ್ಷ ಗರಿಷ್ಟ ಅವಧಿ ವರೆಗೆ ಮಾತ್ರ ಈ ಭತ್ಯೆ ಸಿಗಲಿದೆ. “ಸೇವಾಸಿಂಧು”, “ಗ್ರಾಮ ಒನ್”, “ಕರ್ನಾಟಕ ಒನ್” ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ನೇರ ನಗದು ವರ್ಗಾವಣೆಗಳನ್ನು (ಡಿಬಿಟಿ) ಸ್ವೀಕರಿಸಲು ಮೊಬೈಲ್ ಸಂಖ್ಯೆಗೆ ಲಿಂಕ್ ಆದ ಆದಾರ್ ಸಂಖ್ಯೆಯ ಬ್ಯಾಂಕ್ ಖಾತೆಯನ್ನು ಹೊಂದಿರತಕ್ಕದ್ದು. ನಿರುದ್ಯೋಗ ಸ್ಥಿತಿ ಬಗ್ಗೆ ಸ್ವಯಂ ಘೋಷಿಸಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು.
ಅಭ್ಯರ್ಥಿಗಳು ಅರ್ಜಿ ಹಾಕುವ ವೇಳೆ ತಾವು ಉತ್ತೀರ್ಣರಾದ ದಿನದಿಂದ 6 ತಿಂಗಳವರೆಗಿನ ತಮ್ಮ ಬ್ಯಾಂಕ್ ಖಾತೆಯ ವಹಿವಾಟು (ಸ್ಟೇಟ್ ಮೆಂಟ್) ಪ್ರತಿ ನೀಡಬೇಕು. ಪದವಿ, ಡಿಪ್ಲೋಮಾ ಬಳಿಕ ಉನ್ನತ ಶಿಕ್ಷಣ ಮುಂದುವರಿಸಿದರೆ ಈ ಭತ್ಯೆಗೆ ಅರ್ಹರಾಗುವುದಿಲ್ಲ. ಅರ್ಜಿ ಸಲ್ಲಿಸಲು ಮತದಾರರ ಗುರುತಿನ ಚೀಟಿ, ಪದವಿ ಅಭ್ಯರ್ಥಿಗಳಾಗಿದ್ದರೆ ಅಂಕಪಟ್ಟಿ ಮತ್ತು ವಿಶ್ವವಿದ್ಯಾಲಯದ ಪದವಿ ಪ್ರಮಾಣ ಪತ್ರ, ಡಿಪ್ಲೋಮಾ ಹೊಂದಿದ್ದರೆ ಸಂಬಂಧಿಸಿದ ಶಿಕ್ಷಣ ಇಲಾಖೆಯಿಂದ ನೀಡಿದ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು ಅದರ ಮಾಹಿತಿ ಅಗತ್ಯವಿದೆ. ಯಾವುದೇ ಅಪ್ರೆಂಟಿಸ್ ಹುದ್ದೆಯಲ್ಲಿದ್ದು ವೇತನ ಪಡೆಯುತ್ತಿರುವವರು, ಸರ್ಕಾರಿ-ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು, ಸರ್ಕಾರದ ನಾನಾ ಯೋಜನೆಗಳಡಿ ಬ್ಯಾಂಕ್ ಸಾಲಪಡೆದು ಸ್ವ-ಉದ್ಯೋಗ ಆರಂಭಿಸಿದವರು ಈ ಯೋಜನೆಗೆ ಅರ್ಹರಾಗುವುದಿಲ್ಲ. ಅರ್ಹ ಯುವಕ/ ಯುವತಿಯರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.