Home ಸುದ್ಧಿಗಳು ರಾಜ್ಯ ಕರಾವಳಿ ಮೀನುಗಾರರ ಬೇಡಿಕೆಗಳ ಬಗ್ಗೆ ಮೀನುಗಾರಿಕೆ ಸಚಿವರ ಸಭೆ

ಕರಾವಳಿ ಮೀನುಗಾರರ ಬೇಡಿಕೆಗಳ ಬಗ್ಗೆ ಮೀನುಗಾರಿಕೆ ಸಚಿವರ ಸಭೆ

124
0

ಬೆಂಗಳೂರು, ಜೂ.20: ಕರಾವಳಿ ಮೀನುಗಾರರ ವಿವಿಧ ಸಮಸ್ಯೆ ಬೇಡಿಕೆಗಳ ಬಗ್ಗೆ ಮೀನುಗಾರಿಕೆ ಸಚಿವರಾದ ಮಂಕಾಳ ವೈದ್ಯರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ ಶೀಘ್ರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಚರ್ಚಿಸಿದರು. ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಪದಾಧಿಕಾರಿಗಳು ಸಚಿವರನ್ನು ಭೇಟಿಯಾಗಿ ರಾಜ್ಯದ ಎಲ್ಲಾ ಮೀನುಗಾರಿಕಾ ಬಂದರಿಗೆ ಸಂಬಂಧಿಸಿದ ರಸ್ತೆ ಹಾಗೂ ಮೂಲ ಸೌಕರ್ಯ ಅಭಿವದ್ಧಿ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಮಾಡಿದರು.

1984 ಮೀನುಗಾರಿಕಾ ಕಾಯ್ದೆಯ ನಿಯಮಾವಳಿಗಳನ್ನು ಪ್ರಸ್ತುತ ಸಾಲಿಗೆ ಪೂರಕವಾಗುವಂತೆ ತಿದ್ದುಪಡಿ, ಬಂದರಿನ ಸಮರ್ಪಕ ನಿರ್ವಹಣೆಯ ಹಿತದೃಷ್ಟಿಯಿಂದ ಸ್ಥಳೀಯ ಮೀನುಗಾರಿಕಾ ಸಂಘ ಸಂಸ್ಥೆಗಳಿಗೆ ಅವಕಾಶ ಕಲ್ಪಿಸುವುದು, ದಿನವಹಿ ಡೀಸೆಲ್ ಕೋಟವನ್ನು 500 ಲೀಟರಿಗೆ ಏರಿಕೆ, ಮಹಿಳಾ ಮೀನುಗಾರರಿಗೆ ಬಡ್ಡಿರಹಿತ ಸಾಲ ಹಾಗೂ ಮೀನು ಒಣಗಿಸುವ ಸ್ಥಳವನ್ನು ರಿಯಾಯಿತಿ ದರದಲ್ಲಿ ಕನಿಷ್ಠ 15 ವರ್ಷಕ್ಕೆ ಗುತ್ತಿಗೆ ನೀಡುವುದು, ಮೀನುಗಾರಿಕಾ ಬೋಟ್ ವಿಮೆಯ ನಿಯಮಾವಳಿ ಸರಳೀಕರಣ ಹಾಗೂ ವಿಮಾ ಪರಿಹಾರ ಮೊತ್ತವನ್ನು ಶೀಘ್ರ ಮಂಜೂರು ಮಾಡಲು ಕ್ರಮ ಹಾಗೂ ಮಲ್ಪೆ ಮೀನುಗಾರಿಕಾ ಬಂದರಿನ ಔಟರ್ ಹಾರ್ಬರ್ ಯೋಜನೆ ಮಂಜೂರು, ಡ್ರೆಜಿಂಗ್ ಹಾಗೂ ವಿವಿಧ ಬಂದರುಗಳ ಅಭಿವೃದ್ಧಿ, ನಾಡದೋಣಿ ಮೀನುಗಾರರಿಗೆ ಸಮರ್ಪಕ ಸೀಮೆ ಎಣ್ಣೆ ಪೂರೈಕೆ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಮೀನುಗಾರಿಕೆ ಇಲಾಖೆ ನಿರ್ದೇಶಕರಾದ ದಿನೇಶ್ ಕಲ್ಲೇರ್, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ, ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ರಾಮಚಂದ್ರ ಕುಂದರ್, ಸೋಮನಾಥ ಕಾಂಚನ್, ಮೋಹನ್ ಬೆಂಗ್ರೆ, ಚೇತನ್ ಬೆಂಗ್ರೆ, ನವೀನ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.