ಉಳ್ಳಾಲ, ಆ.28: ಉಳ್ಳಾಲ ತಾಲೂಕು ಮುಡಿಪು ಶ್ರೀ ಭಾರತೀ ಶಾಲೆಯ ಅಮೃತ ಮಹೋತ್ಸವ ಸರಣಿ ಕಾರ್ಯಕ್ರಮಗಳ ಮೂಲಕ ಆಚರಣೆಯಾಗಿದ್ದು, ಭಾನುವಾರ ಸ್ನೇಹ ಮಿಲನ , ಕೃತಜ್ಞತಾಮೃತ ಹಾಗೂ ಅಮೃತ ಭಾರತೀ ಸ್ಮರಣ ಸಂಚಿಕೆ ಲೋಕಾರ್ಪಣೆಯೊಂದಿಗೆ ವಿಧ್ಯುಕ್ತ ತೆರೆ ಕಂಡಿತು. ಸ್ನೇಹ ಮಿಲನ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವದ ‘ಅಮೃತ ಭಾರತೀ’ ಸ್ಮರಣ ಸಂಚಿಕೆಯ ಅಂತಿಮ ಪ್ರತಿಗಳನ್ನು ಅನಾವರಣಗೊಳಿಸಿ ಹಂಚಲಾಯಿತು.
ಅಮೃತ ಮಹೋತ್ಸವಕ್ಕೆ ಶ್ರಮಿಸಿದ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ಬೋಧಕೇತರ ವೃಂದ, ಅಮೃತ ಮಹೋತ್ಸವ ಸಮಿತಿ ಪದಾಧಿಕಾರಿಗಳು, ನಾನಾ ರೀತಿಯಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ‘ಆಟಿದ ನೆಂಪು, ಸೋಣದ ಕಂಪು’ ಹೆಸರಿನಲ್ಲಿ ತುಳುನಾಡಿನ ವಿಶಿಷ್ಟ ತಿನಿಸುಗಳನ್ನು ಉಣಬಡಿಸಲಾಯಿತು. ಸಹ ಭೋಜನ ಆಯೋಜಿಸಲಾಗಿತ್ತು. ತುಳು ವಿದ್ವಾಂಸ ಚಂದ್ರಹಾಸ ಕಣಂತೂರು ತುಳುನಾಡಿನ ಆಚರಣೆಗಳ ಕುರಿತು ಉಪನ್ಯಾಸ ನೀಡಿದರು, ತುಳು ಎದುರು ಕತೆಗಳ ಮೂಲಕ ಹಳೆ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯಕ್ಕೆ ಸವಾಲೊಡ್ಡಿದರು. ಹಳೆ ವಿದ್ಯಾರ್ಥಿಗಳು, ಅಮೃತ ಮಹೋತ್ಸವ ಸಮಿತಿ ಪ್ರಮುಖರು ಕಾರ್ಯಕ್ರಮಗಳ ಸಿಂಹಾವಲೋಕನ ಮಾಡಿದರು. ಶಾಲೆಯ ಏಳನೇ ಹಾಗೂ ಹತ್ತನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲೆಯ ನಿವೃತ್ತ ಶಿಕ್ಷಕಿ ಲೀಲಾ ಟೀಚರ್ ಅವರು ಕೊಡಮಾಡಿದ ನಗದು ಪುರಸ್ಕಾರದ ದತ್ತಿನಿಧಿಯ ದಾಖಲೆಗಳನ್ನು ಶಾಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ: ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ನಡೆದಿದ್ದು, ಮುಂದಿನ ಅವಧಿಗೆ ಅಧ್ಯಕ್ಷರಾಗಿ ನಿಶ್ಚಲ್ ಡಿ.ಶೆಟ್ಟಿ ಮೂರನೇ ಅವಧಿಗೆ ಪುನರಾಯ್ಕೆಯಾದರು. ಗೌರವಾಧ್ಯಕ್ಷರಾಗಿ ಜಗದೀಶ್ ಅಡಪ ಕಡ್ವಾಯಿ, ಉಪಾಧ್ಯಕ್ಷರಾಗಿ ನರಸಿಂಹ ಭಟ್ ಎನ್., ರಶ್ಮಿ ಅಮ್ಮೆಂಬಳ, ಮಜೀದ್ ಮದ್ದನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಾಮಕೃಷ್ಣ ಭಟ್, ಜೊತೆ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮೀ, ಕೋಶಾಧಿಕಾರಿಯಾಗಿ ಮನು ವೆಂಕಟೇಶ್, ಗೌರವ ಸಲಹೆಗಾರರಾಗಿ ಉಮೇಶ್ ಕೆ.ಆರ್. ಹಾಗೂ ಸುಬ್ರಹ್ಮಣ್ಯ ಭಟ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಮಹಮ್ಮದ್ ಅಸ್ಗರ್ ಮತ್ತಿತರರು ಆಯ್ಕೆಯಾದರು.
ಸ್ನೇಹಮಿಲನದಲ್ಲಿ ಶ್ರೀ ಭಾರತೀ ಎಜುಕೇಶನ್ ಟ್ರಸ್ಟ್ ಸಂಚಾಲಕ ಕೆ.ಸುಬ್ರಹ್ಮಣ್ಯ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಶೆಟ್ಟಿ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್., ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಸ್ಗರ್, ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್, ಶಕುಂತಲಾ ಶೆಟ್ಟಿ, ಶ್ವೇತಾ ಬಲ್ಲಾಳ್, ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕ ಚಂದ್ರಹಾಸ ಕಣಂತೂರು, ಮುದ್ರಕ ನಾಗೇಶ್ ಕಲ್ಲೂರು, ಹಿರಿಯ ವಿದ್ಯಾರ್ಥಿಗಳಾದ ಜಗದೀಶ ಅಡಪ ಕಡ್ವಾಯಿ, ರಾಧಾಕೃಷ್ಣ ರೈ ಉಮಿಯ, ಪ್ರಶಾಂತ ಕಾಜವ, ಅಶ್ರಫ್ ಕುರ್ನಾಡು, ನವೀನ್ ಡಿಸೋಜ, ಪಿ.ನಾರಾಯಣ ಭಟ್, ಹಿರಿಯ ಶಿಕ್ಷಕ ರಾಮ ರಾವ್, ವಿಜಯಲಕ್ಷ್ಮೀ, ಹರೀಶ್, ಪ್ರಮುಖರಾದ ಸಂತೋಷ್ ಕುಮಾರ್ ರೈ ಬೋಳಿಯಾರು, ಉದ್ಯಮಿ ರಮೇಶ ಶೇಣವ, ಮೈಸೂರು ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಪ್ರಮುಖರಾದ ಅಬೂಬಕ್ಕರ್ ಹೂಹಾಕುವ ಕಲ್ಲು, ಜಿ.ರಾಮಕೃಷ್ಣ ಭಟ್, ವಿಜಯಕುಮಾರಿ ಮತ್ತಿತರರು ಹಾಜರಿದ್ದರು. ಜಯಂತಿ ಶೇಟ್ ಪ್ರಾರ್ಥಿಸಿದರು. ಡಾ.ಮಂಜುಳಾ ಶೆಟ್ಟಿ ನಿರೂಪಿಸಿದರು.
ಎರಡು ವರ್ಷಗಳ ಸುದೀರ್ಘ ಆಚರಣೆ: 1948ರಲ್ಲಿ ಮುಡಿಪು ಭಾರತಿ ಶಾಲೆ ಸ್ಥಾಪನೆಯಾಗಿತ್ತು. 2022 ಆ.15ರಿಂದ ಅಮೃತ ಮಹೋತ್ಸವ ಚಟುವಟಿಕೆಗಳು ಪ್ರಾರಂಭಗೊಂಡವು. ಬಳಿಕ ಅಮೃತ ಮಹೋತ್ಸವ ಸಮಿತಿ ಮೂಲಕ ವಿವಿಧ ಸರಣಿ ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು. 2023 ನ.11 ಹಾಗೂ 12ರಂದು ಅದ್ಧೂರಿಯಾಗಿ ಅಮೃತ ಮಹೋತ್ಸವ ಸಂಪನ್ನಗೊಂಡಿತು. ಅಮೃತ ಮಹೋತ್ಸವ ನೆನಪಿಗೆ ಹಲವು ಸೇವಾ ಕಾರ್ಯ ನಡೆಸಲಾಗಿದ್ದು, ಅಮೃತ ಭಾರತೀ ಹೆಸರಿನ ಕಟ್ಟಡ ಉದ್ಘಾಟನೆಗೊಂಡಿದೆ. ‘ಅಮೃತ ಭಾರತಿ’ ಹೆಸರಿನ ಸ್ಮರಣ ಸಂಚಿಕೆಯಲ್ಲಿ 1948ರಿಂದ 2016ರ ತನಕ ಶಾಲೆಯಲ್ಲಿ ಕಲಿತ ಸುಮಾರು 5 ಸಾವಿರಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳ ಹೆಸರು ಸಂಗ್ರಹಿಸಿ ಪ್ರಕಟಿಸಿರುವುದು ವಿಶೇಷ.