ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ವಿದ್ಯುಕ್ತ ಚಾಲನೆ ನೀಡಿದರು. ಚಾಮುಂಡಿ ಬೆಟ್ಟದಲ್ಲಿ ದೀಪ ಬೆಳಗುವ ಮೂಲಕ ಬೆಳ್ಳಿರಥದಲ್ಲಿ ಮಹಿಷಾಸುರ ಮರ್ದಿನಿ ಅವತಾರದ ಪಂಚಲೋಹದ ವಿಗ್ರಹಕ್ಕೆ ಶುಭ ಮುಹೂರ್ತದಲ್ಲಿ ರಾಷ್ಟ್ರಪತಿ ಪುಷ್ಪಾರ್ಚನೆ ಮಾಡಿದರು.
ಇದರೊಂದರಿಗೆ ದಸರಾ ಮಹೋತ್ಸವದ ವಿಧಿವಿಧಾನಗಳು ಅಧಿಕೃತವಾಗಿ ಆರಂಭವಾದವು. ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ರಾಣಿ ಅಬ್ಬಕ್ಕ, ರಾಣಿ ಚೆನ್ನಮ್ಮ, ಒನಕೆ ಓಬವ್ವ ಮಹಿಳಾ ಸಬಲೀಕರಣಕ್ಕೆ ಸದಾ ಸ್ಪೂರ್ತಿಯಾಗಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ಮಹಿಳಾ ಸಬಲೀಕರಣ ಆಗಬೇಕಿದೆ.
12ನೇ ಶತಮಾನದ ಸಮಾಜ ಸುಧಾರಕರ ಬಗ್ಗೆ ಉಲ್ಲೇಖಿಸಿದ ರಾಷ್ಟ್ರಪತಿ ಮುರ್ಮು, 900 ವರ್ಷಗಳ ಹಿಂದೆ ಸಂತರು, ಸಮಾಜ ಸುಧಾರಕರು ಕೊಟ್ಟಿದ ವಚನಗಳು ಇಂದು ಕೂಡ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದರು.
ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಚಿವ ಸುನೀಲ್ ಕುಮಾರ್ ಉಪಸ್ಥಿತರಿದ್ದರು.