ಉಡುಪಿ: ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಕೊರೊನಾ ಅಬ್ಬರ ತೀವ್ರವಾಗಿದೆ. ಶುಕ್ರವಾರ ಕೇರಳದಲ್ಲಿ 20,772 ಹೊಸ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು 116 ಮಂದಿ ಸಾವನ್ನಪ್ಪಿದ್ದಾರೆ.
ಏತನ್ಮಧ್ಯೆ ಕೇಂದ್ರದಿಂದ ತಂಡವು ಪರಿಶೀಲನೆ ನಡೆಸುವ ಸಲುವಾಗಿ ಕೇರಳಕ್ಕೆ ಬಂದಿಳಿದಿದೆ. ತಂಡದ ನಿರ್ದೇಶಕ ಡಾ. ಎಸ್.ಕೆ. ಸಿಂಗ್ ಸುದ್ಧಿಗಾರರೊಂದಿಗೆ ಮಾತನಾಡುತ್ತಾ, ದೇಶಾದ್ಯಂತ ಕೊರೊನಾ ನಿಯಂತ್ರಣದಲ್ಲಿದ್ದರೂ ಕೇರಳದಲ್ಲಿ ಮಾತ್ರ ಪಾಸಿಟಿವಿಟಿ ಪ್ರಮಾಣ ಮತ್ತು ಹರಡುವಿಕೆ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಈ ಕುರಿತು ಕೇರಳ ಸರಕಾರದೊಂದಿಗೆ ಗಂಭೀರ ಚರ್ಚೆ ನಡೆಯಲಿದೆ. ಇದಕ್ಕೆ ಸೂಕ್ತವಾದ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದರು.
ರಾಜ್ಯಕ್ಕೆ ಎಚ್ಚರಿಕೆಯ ಕರೆಘಂಟೆ:
ಕೇರಳದಿಂದ ಪ್ರವಾಸ ಮತ್ತು ಅನ್ಯ ಕಾರ್ಯದ ನಿಮಿತ್ತ ರಾಜ್ಯಕ್ಕೆ ಬರುವವರು ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಈ ಕುರಿತು ಸರಿಯಾದ ರೀತಿಯಲ್ಲಿ ನಿಗಾವಹಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಈಗಾಗಲೇ ನಿಯಂತ್ರಣಕ್ಕೆ ಬಂದಿರುವ ಪಾಸಿಟಿವ್ ಪ್ರಕರಣಗಳು ಮತ್ತೊಮ್ಮೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ.
ಈಗಾಗಲೇ ಕೇರಳ-ಕರ್ನಾಟಕ ಗಡಿ ಪ್ರದೇಶಗಳಲ್ಲಿ ತಪಾಸಣೆ ಆರಂಭಗೊಂಡಿದ್ದು ಮತ್ತಷ್ಟು ಕಟ್ಟುನಿಟ್ಟಾಗಿ ನಡೆಯಬೇಕಿದೆ. ಕೋವಿಡ್ ಮುಂಜಾಗ್ರತಾ ಕ್ರಮಗಳು ಉಲ್ಲಂಘನೆಯಾಗದ ಹಾಗೆ ಎಚ್ಚರಿಕೆ ವಹಿಸಬೇಕಾಗಿದೆ.
ಶುಕ್ರವಾರ ರಾಜ್ಯದಲ್ಲಿ 1890 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು 34 ಮಂದಿ ಸಾವನ್ನಪ್ಪಿದ್ದಾರೆ.