ಶಿವಮೊಗ್ಗ: 2023 ಫೆಬ್ರವರಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಇಲ್ಲಿನ ಸೋಗಾನೆಯಲ್ಲಿ ಸಿದ್ಧವಾಗಿರುವ ವಿಮಾನ ನಿಲ್ದಾಣವನ್ನು ಫೆಬ್ರವರಿ ಮೊದಲ ವಾರದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ವಿಮಾನ ನಿಲ್ದಾಣದ ಕಾಮಗಾರಿಯ ಪರಿಶೀಲನೆ ನಡೆಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಶಂಕುಸ್ಥಾಪನೆ ನಡೆದು ಕೇವಲ ಎರಡು ವರ್ಷಗಳಲ್ಲಿ ಪೂರ್ಣಗೊಂಡ ಮೊದಲ ವಿಮಾನ ನಿಲ್ದಾಣ ಎಂಬ ಶ್ರೇಯ ಶಿವಮೊಗ್ಗಕ್ಕೆ ಸಲ್ಲುತ್ತದೆ.
ನೂತನ ವಿಮಾನ ನಿಲ್ದಾಣದ ರನ್ ವೇ ನಿರ್ಮಾಣ ಕಾಮಗಾರಿಯು ಅಂತಿಮ ಹಂತದಲ್ಲಿದೆ. 3110 ಮೀಟರ್ ಉದ್ದ ಹಾಗೂ 45 ಮೀಟರ್ ಅಗಲವಿರುವ ವಿಮಾನ ನಿಲ್ದಾಣದ ರನ್ ವೇ ರಾಜ್ಯದಲ್ಲೇ ಅತಿ ಉದ್ದದ ಎರಡನೇ ರನ್ ವೇ ಎಂಬ ದಾಖಲೆ ನಿರ್ಮಿಸಿದೆ.
ಡಿಸೆಂಬರ್ ಅಂತ್ಯದ ವೇಳೆ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು ಪ್ರಧಾನಿ ನರೇಂದ್ರ ಮೋದಿ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು. ಸಂಸದ ಬಿ.ವೈ.ರಾಘವೇಂದ್ರ ಮುಂತಾದವರಿದ್ದರು.