Monday, January 20, 2025
Monday, January 20, 2025

36ನೇ ರಾಜ್ಯ ಪತ್ರಕರ್ತರ ಸಮ್ಮೇಳನ

36ನೇ ರಾಜ್ಯ ಪತ್ರಕರ್ತರ ಸಮ್ಮೇಳನ

Date:

ಕಲಬುರಗಿ: ಸಣ್ಣ ಪತ್ರಿಕೆಗಳು ಪ್ರಸಾರದಲ್ಲಿ ಕಡಿಮೆ ಸಂಖ್ಯೆ ಹೊಂದಿದ್ದರೂ ಕೂಡ ಅಲ್ಲಿನ ಸುದ್ದಿ, ಲೇಖನ, ಅಂಕಣಗಳ ಮೌಲ್ಯ ದೊಡ್ಡದು. ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯ ಕಾರ್ಡು, ಬಸ್‌ಪಾಸ್ ಸೇರಿದಂತೆ ಇತರ ಸೌಲಭ್ಯಗಳಿಗೆ ಬರುವ ಬಜೆಟ್‌‌ನಲ್ಲಿ ಆದ್ಯತೆ ನೀಡಲಾಗುವುದು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿ ಹಾಗೂ ಕೋಶಕ್ಕೆ ವಾರಾಂತ್ಯದೊಳಗೆ ಪೂರ್ಣ ನೇಮಕಾತಿ ಮಾಡಿ 3 ಸಾವಿರ ಕೋಟಿ ರೂ.ಕ್ರಿಯಾ ಯೋಜನೆಯನ್ನು ಒಂದು ವರ್ಷದ ಅವಧಿಯೊಳಗೆ ಅನುಷ್ಠಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಇಲ್ಲಿನ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಏರ್ಪಡಿಸಿರುವ 36 ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕಾ ರಂಗ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಖಾಸಗೀಕರಣ, ಉದಾರೀಕರಣ, ಜಾಗತೀಕರಣದ ಮಾರುಕಟ್ಟೆ ಆಧಾರಿತ ವ್ಯವಹಾರದ ನಡುವೆ ಜನಪರ ಆದ್ಯತೆಗಳನ್ನು, ಅಂತಃಕರಣವನ್ನು ಪತ್ರಿಕೆಗಳು ಕಾಯ್ದುಕೊಳ್ಳುವುದು ಬಹಳ ಮುಖ್ಯ.

ಸಮಾಜದಲ್ಲಿ ದೊಡ್ಡ ಬದಲಾವಣೆಗಳನ್ನು ತರಲು ಸಾಧ್ಯ. ಪತ್ರಿಕಾರಂಗ ಸದಾ ಜಾಗೃತವಾಗಿದ್ದರೆ, ಸಮಾಜ, ಸರ್ಕಾರಗಳೂ ಜಾಗೃತವಾಗಿರುತ್ತವೆ. ಪತ್ರಿಕೆಗಳಿಗೆ ಅಗತ್ಯವಿರುವ ಜಾಹೀರಾತು, ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯ ಕಾರ್ಡು, ಬಸ್‌ಪಾಸ್ ಸೌಕರ್ಯಗಳನ್ನು ನೀಡಲು ಬರುವ ಬಜೆಟ್‌ನಲ್ಲಿ ಕ್ರಮ ವಹಿಸಲಾಗುವುದು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ.ತಿಂಗಳಾಂತ್ಯದೊಳಗೆ ಈ ಭಾಗದ ಶಾಸಕರ ಸಭೆ ನಡೆಸಿ ಅಂತಿಮಗೊಳಿಸಲಾಗುವುದು.ಅನುದಾನ ಒದಗಿಸಿ ಒಂದೇ ವರ್ಷದಲ್ಲಿ ಯೋಜನೆಗಳ ಅನುಷ್ಠಾನ ಮಾಡಲಾಗುವುದು‌ ಎಂದರು.

ಕಲ್ಯಾಣದ ಪುಣ್ಯಭೂಮಿ ಕಲಬುರಗಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಪತ್ರಕರ್ತರಿಗೆ, ಪತ್ರಿಕೋದ್ಯಮಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ. ಸ್ವಾತಂತ್ರ್ಯ ಚಳುವಳಿಗೆ ಕೈಬರಹದ ಹಾಗೂ ಮೊಳೆ ಜೋಡಣೆ ಮುದ್ರಣ ಆಧಾರಿತ ಹಲವಾರು ಪತ್ರಿಕೆಗಳು ಭೂಗತವಾಗಿ ಕಾರ್ಯ ಮಾಡಿ, ದೇಶಭಕ್ತಿ, ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ.

ಪಾಶ್ಚಿಮಾತ್ಯ ಪತ್ರಿಕೋದ್ಯಮ ಪ್ರಭಾವದ ನಡುವೆಯೂ ವಸಾಹತೋತ್ತರ ಕಾಲದಲ್ಲಿ ಭಾರತೀಯ ಪತ್ರಿಕೆಗಳು ಸ್ವಂತಿಕೆ ರೂಢಿಸಿಕೊಂಡಿವೆ. ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಪತ್ರಿಕೆಗಳ ಮೇಲೆ ದೊಡ್ಡ ಪ್ರಹಾರ ನಡೆಯಿತು. ಪತ್ರಕರ್ತರು ಅದನ್ನು ಗಟ್ಟಿಯಾಗಿ ಎದುರಿಸಿದರು.

ಪತ್ರಿಕೋದ್ಯಮಿ ಸದಾ ಜಾಗೃತವಾಗಿ ಕೆಲಸ ಮಾಡಿದರೆ ಸರ್ಕಾರ, ಸಮಾಜ ಎಚ್ಚರವಾಗಿರುತ್ತದೆ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ, ಅಂಗನವಾಡಿ, ಆಶಾ, ಪೊಲೀಸ್, ಪೌರಕಾರ್ಮಿಕರೊಂದಿಗೆ ಪತ್ರಕರ್ತರು ಕೂಡ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿ ಕಾರ್ಯನಿರ್ವಹಿಸಿದ್ದಾರೆ.

ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ, ಬಹುತೇಕ ಕುಟುಂಬದವರಿಗೆ ಈಗಾಗಲೇ ತಲಾ 5 ಲಕ್ಷ ರೂ.ಪರಿಹಾರ ನೀಡಲಾಗಿದೆ. ಇನ್ನೂ ಬಾಕಿ ಇರುವ ವ್ಯಕ್ತಿಗಳ ಕುಟುಂಬಕ್ಕೂ ಒದಗಿಸಲಾಗುವುದು. ಪತ್ರಕರ್ತರು-ರಾಜಕಾರಣಿಗಳು ಪರಸ್ಪರ ಅವಿನಾಭಾವ ಸಂಬಂಧ ಹೊಂದಿರುತ್ತಾರೆ.

ಸಮಾಜದ ಒಳಿತಿಗೆ ಅದು ಬಳಕೆಯಾಗಬೇಕು. ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿ ಕುರಿತು ಈ ಸಮ್ಮೇಳನದಲ್ಲಿ ಚರ್ಚೆಗಳಾಗಲಿ ಅವುಗಳ ನಿರ್ಣಯಗಳ ಕರಡನ್ನು ಸರಕಾರಕ್ಕೆ ಕಳುಹಿಸಿಕೊಡಿ ಅವುಗಳ ಜಾರಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದರು.

ಪತ್ರಕರ್ತರಿಗೂ ರಾಜಕಾರಣಿಗಳಿಗೆ ಬಿಡಿಸಲಾಗದ ನಂಟಿದೆ. ಒಳ್ಳೆಯ ಉದ್ದೇಶಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಿದರೆ ಜನಕಲ್ಯಾಣ ಸಾಧ್ಯ ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್‌ ಸಿಂಗ್ ವಸ್ತು ಪ್ರದರ್ಶನ ಉದ್ಘಾಟಿಸಿದರು. ಸಂಸದ ಡಾ. ಉಮೇಶ ಜಾಧವ ವ್ಯಂಗ್ಯಚಿತ್ರ ಪ್ರದರ್ಶನ ಉದ್ಘಾಟಿಸಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಕೆಯುಡಬ್ಲುಜೆ 2022 ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಪತ್ರಿಕಾ ಭವನದ ಮೊದಲ ಮಹಡಿ ಉದ್ಘಾಟನೆ, ಕೋವಿಡ್ ಕತೆಗಳು, ಮಾಧ್ಯಮ ಅವಲೋಕನ ಹಾಗೂ ಮಾಧ್ಯಮ ಹೆಜ್ಜೆಗಳು ಕೃತಿಗಳನ್ನು ಮುಖ್ಯಮಂತ್ರಿಯವರು ಬಿಡುಗಡೆ ಮಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳ ಪ್ರದಾನ ಮಾಡಲಾಯಿತು.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧ ಮಾತನಾಡಿದರು. ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸಪ್ಪ ಅಪ್ಪ ದಿವ್ಯ ಸಾನಿಧ್ಯ ವಹಿಸಿದ್ದರು.

ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಸುಭಾಷ ಗುತ್ತೇದಾರ, ಡಾ. ಅವಿನಾಶ ಜಾಧವ, ಬಸವರಾಜ ಮತ್ತಿಮುಡ, ಶರಣು ಸಲಗರ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಶಶಿಲ್ ನಮೋಶಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ.ಎಸ್.ಹರ್ಷ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತಿತರರು ವೇದಿಕೆಯಲ್ಲಿದ್ದರು.

ವಿಜಯ ಕರ್ನಾಟಕ ಸಂಪಾದಕ ಹರಿಪ್ರಕಾಶ ಕೋಣೆಮನೆ ಮೊದಲ ಮಾತುಗಳನ್ನಾಡಿದರು. ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಮಹೇಶ ಬಡಿಗೇರ ಮತ್ತು ತಂಡದ ಕಲಾವಿದರು ಪ್ರಾರ್ಥಿಸಿದರು. ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಎಂ ಠಾಕೂರ ಸ್ವಾಗತಿಸಿದರು. ಕೆ.ಜಿ.ಬೋಪಯ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!