ಮಂಡ್ಯ: ಪಡಿ ಸಂಸ್ಥೆ ಮಂಗಳೂರು ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಂಡ್ಯ ತಾಲೂಕು ಇವರ ಸಹಯೋಗದೊಂದಿಗೆ ಹಳೆಬೂದನೂರು ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಶಾಲೆಯಲ್ಲಿ ಶಿಕ್ಷಣ ಹಕ್ಕು ಕಾಯಿದೆ ಮತ್ತು ಮಕ್ಕಳ ರಕ್ಷಣೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಮತ್ತು ಸಮುದಾಯದ ಪಾತ್ರಗಳ ಬಗ್ಗೆ ವಿಶ್ಲೇಷಣಾ ಸಭೆ ನಡೆಯಿತು.
ರಾಜ್ಯ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷರಾದ ನಾಗಣ್ಣ ಗೌಡ ಉದ್ಘಾಟಿಸಿ ಮಾತನಾಡುತ್ತಾ, ಸಮಾಜದ ಇಂದಿನ ಪರಿಸ್ಥಿತಿ ಗಮನಿಸಿದಾಗ ನಾವೆಲ್ಲರೂ ತಲೆ ತಗ್ಗಿಸುವಂತಾಗಿದೆ. ಮಕ್ಕಳ ಜೀವ, ಜೀವನ ಹಾಳು ಮಾಡಲು ಯಾರಿಗೂ ಅಧಿಕಾರವಿಲ್ಲ, ಉತ್ತಮ ಭವಿಷ್ಯ ಕಂಡುಕೊಳ್ಳಬೇಕಾದ ಮಕ್ಕಳನ್ನು ಚಿವುಟದೆ ಅವರ ಉತ್ತಮ ಭವಿಷ್ಯಕ್ಕೆ ನಾವೆಲ್ಲರೂ ಕಾರಣಕರ್ತರಾಗಬೇಕು.
ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡಿದರೆ ಮಕ್ಕಳ ಹಕ್ಕುಗಳ ಆಯೋಗವು ಯಾವುದೇ ರೀತಿಯಲ್ಲಿ ಅದನ್ನು ಸಹಿಸುವುದಿಲ್ಲ. ಗ್ರಾಮ ಮಟ್ಟದಲ್ಲಿ ಮಕ್ಕಳ ರಕ್ಷಣೆಗೋಸ್ಕರ ಗ್ರಾಮ ಮಕ್ಕಳ ರಕ್ಷಣಾ ಸಮಿತಿ ಇದೆ. ಇದನ್ನು ಪ್ರತಿ ಶಾಲೆಗಳಲ್ಲೂ ಅಳವಡಿಸಬೇಕು, ಈ ನಿಟ್ಟಿನಲ್ಲಿ ಪಡಿ ಸಂಸ್ಥೆ ಕಾರ್ಯ ಪ್ರವೃತವಾಗಿರುವುದು ಉತ್ತಮ ಬೆಳವಣಿಗೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಕಾಂತ್ ಮಾತನಾಡಿ, ಪಡಿ ಸಂಸ್ಥೆಯು ಸರಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಎಸ್.ಡಿ.ಎಂ.ಸಿ ಮತ್ತು ಸಮುದಾಯವನ್ನು ಬಲಪಡಿಸಲು ಕೈಗೊಂಡಿರುವ ವಿವಿಧ ಚಟುವಟಿಕೆಗಳ ಈ ವಿಶ್ಲೇಷಣಾ ಸಭೆಯು ಉತ್ತಮ ಕಾರ್ಯಕ್ರಮವಾಗಿದೆ. ಈಗಾಗಲೇ ಮಂಡ್ಯ ತಾಲೂಕಿನ ಎಲ್ಲಾ ಶಾಲೆಗಳಲ್ಲೂ ಮಕ್ಕಳ ರಕ್ಷಣಾ ಸಮಿತಿ ರಚಿಸಲಾಗಿದೆ ಎಂದರು.
ಪಡಿ ಸಂಸ್ಥೆ ವಿಭಾಗಿಯ ಸಂಯೋಜಕರಾದ ರಾಜೇಶ್ವರಿ ಮಾತನಾಡಿ, ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಿಗೆ ಮನೆಯಿಂದ ಪೋಷಕರ ನಿರ್ಲಕ್ಷ್ಯ, ಸಮುದಾಯ ಸಂಘಟನೆಯ ಕೊರತೆಯೂ ಕಾರಣವಾಗಿದೆ. ಮಕ್ಕಳನ್ನು ಕೇವಲ ಅಂಕದ ಆಧಾರದಲ್ಲಿ ಬೆಳೆಸುವ ಬದಲು ಮಾನವೀಯ ಮೌಲ್ಯಗಳನ್ನು, ಸಾಮಾಜಿಕ ಕಳಕಳಿಗಳ ಬಗ್ಗೆ ಮಕ್ಕಳ ಮನಸ್ಸಿಗೆ ನಾಟುವಂತೆ ತಿಳಿಹೇಳಬೇಕಾಗಿದೆ.
ಈಗಾಗಲೇ ಹಳೆಬೂದನೂರು ಕ್ಷಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ಮಕ್ಕಳ ರಕ್ಷಣಾ ನೀತಿಯ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡಿದ್ದು ಪ್ರತಿ ಶಾಲೆಗಳಲ್ಲೂ ಸರಕಾರದ ಆದೇಶದಂತೆ ಪ್ರಕಾರ ಮಕ್ಕಳ ರಕ್ಷಣಾ ನೀತಿ ಅಳವಡಿಸಬೇಕಾಗಿದೆ. ಈ ಬಗ್ಗೆ ಮುಂದೆ ಜಿಲ್ಲಾ ಮಟ್ಟದಲ್ಲಿ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು.
ಪ್ರತಿಯೊಂದು ಸರಕಾರಿ ಶಾಲೆಗಳು ಎಸ್.ಡಿ.ಎಂ.ಸಿ., ಪೋಷಕರು ಮತ್ತು ಸಮುದಾಯದ ಒಗ್ಗೂಡುವಿಕೆಯಿಂದ ಬೆಳೆಯಬೇಕಾಗಿದೆ, ಹಾಗಿದ್ದಲ್ಲಿ ಶಾಲೆಗಳು ಎಲ್ಲಾ ರೀತಿಯಲ್ಲೂ ಮಾದರಿಯಾಗುತ್ತದೆ ಇದಕ್ಕೆ ಬೇಕಾದ ಉದಾಹರಣೆಗಳು ನಮ್ಮ ಮುಂದೆಯೇ ಕಾಣುತ್ತಿದೆ ಎಂದು ತಿಳಿಸಿದ ಅವರು ಶಾಲಾ ಬೆಳವಣಿಗೆಯಲ್ಲಿ ಉಂಟಾಗುತ್ತಿರುವ ಸಮಸ್ಯೆ – ಸವಾಲುಗಳ ಬಗ್ಗೆ ಎಸ್.ಡಿ.ಎಂ.ಸಿ. ಮತ್ತು ಪೋಷಕರ ಜೊತೆ ಸಂವಾದ ನಡೆಸಿದರು.
ಪಡಿ ಸಂಸ್ಥೆಯ ತರಬೇತುದಾರರಾದ ರಾಣಿ ಚಂದ್ರಶೇಖರ ಸ್ವಾಗತಿಸಿ, ಶಿಕ್ಷಣ ಇಲಾಖೆ ಬಿ.ಆರ್.ಪಿ ಪುಟ್ಟಸ್ವಾಮಿ ವಂದಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಂಡ್ಯ ತಾಲೂಕಿನ ಬಿ.ಆರ್.ಸಿ ಸಂಯೋಜಕರಾದ ಉಮೇಶ್, ಇ.ಸಿ.ಓ. ಚೇತನ್, ಪಡಿ ಸಂಸ್ಥೆ ಮಂಡ್ಯ ವಲಯ ತರಬೇತುದಾರರಾದ ವೀಣಾ, ಶೋಭ, ಹಳೆಬೂದನೂರು ಕ್ಷಸ್ಟರ್ ವ್ಯಾಪ್ತಿಯ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.