ಮಂಗಳೂರು: ರಾಜ್ಯದಾದ್ಯಂತ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಲ್ಲಿಯೂ ಎನ್.ಇ.ಪಿ ಪಠ್ಯಕ್ರಮ ಜಾರಿಯಾಗಲಿದೆ. ಹೌದು, ಈ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದು, ಡಿಸೆಂಬರ್ 25 ರಂದು ರಾಜ್ಯದ 20 ಸಾವಿರ ಅಂಗನವಾಡಿ ಹಾಗೂ 6 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಮಂಗಳೂರಿನ ಕೇಶವ ಸ್ಮ್ರತಿ ಸಂವರ್ಧನ ಸಮಿತಿ ವತಿಯಿಂದ ಮಂಗಳೂರಿನ ‘ಸಂಘ ನಿಕೇತನ’ದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ಶಾಲಾ ಮಕ್ಕಳ ಹಬ್ಬ’ದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ಧಿಗಾರರೊಂದಿಗೆ ಮಾತನಾಡಿದರು.
ನೈತಿಕ ಶಿಕ್ಷಣ ಜಾರಿ: ಈಗಾಗಲೇ ರಾಜ್ಯದ ಶಾಲೆಗಳಲ್ಲಿ ಚಿಲಿಪಿಲಿ, ನಲಿಕಲಿಯ ಮೂಲಕ ಎನ್ ಇಪಿಯ ಆಶಯಗಳನ್ನು ಜಾರಿಗೊಳಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ರಾಜ್ಯದ ಪಠ್ಯಕ್ರಮ ನವೆಂಬರ್ ತಿಂಗಳಾಂತ್ಯಕ್ಕೆ ಬರಲಿದ್ದು, 1,2 ನೇ ತರಗತಿಗೆ ಸಂಖ್ಯಾಶಾಸ್ತ್ರ ಮತ್ತು ಅಕ್ಷರ ಜ್ಞಾನ ಒಳಗೊಂಡ ಪುಸ್ತಕ ಇರುತ್ತದೆ. ಶಾಲೆಗಳಲ್ಲಿ ಶೀಘ್ರವೇ ಧ್ಯಾನ, ಯೋಗವನ್ನು ಆರಂಭಿಸಲಾಗುವುದು. ನೈತಿಕ ಶಿಕ್ಷಣವನ್ನು ಶಾಲೆಗಳಲ್ಲಿ ಆರಂಭಿಸುವ ಯೋಜನೆ ರೂಪಿಸಲಾಗುವುದು ಎಂದು ಅವರು ಹೇಳಿದರು.