ಹುಬ್ಬಳ್ಳಿ: ಮಾಜಿ ಶಾಸಕ ಮಧು ಬಂಗಾರಪ್ಪ ಶುಕ್ರವಾರ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು. ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಧು ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ನಂತರ ಮಾತನಾಡಿದ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಜನಪರ ಕಾಳಜಿಯನ್ನು ಮಧು ಅವರಲ್ಲಿಯೂ ನಾನು ಕಾಣುತ್ತಿದ್ದೇನೆ. ಅವರು ಬಯಸಿದ ಎಲ್ಲ ಯಶಸ್ಸುಗಳು ಅವರಿಗೆ ಒದಗಿಬರಲಿ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡುತ್ತಾ, ನನ್ನ ರಾಜಕೀಯ ಗುರುಗಳಾದ ಎಸ್.ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪನವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲು ಸಂತೋಷವೆನಿಸುತ್ತಿದೆ. ಸಮಾನಮನಸ್ಕರ ಜೊತೆಗೂಡಿ ಪಕ್ಷದ ಬಲವರ್ಧನೆ ಮಾಡುವುದು ನಮ್ಮ ಗುರಿಯಾಗಿದ್ದು, ಮಧು ಬಂಗಾರಪ್ಪನವರು ಆ ನಿಟ್ಟಿನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವರೆಂಬ ವಿಶ್ವಾಸ ನನಗಿದೆ ಎಂದರು.
ಎಐಸಿಸಿ ಕಾರ್ಯದರ್ಶಿ ಮಧು ಯಾಕ್ಷಿಗೌಡ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ಹಿರಿಯ ನಾಯಕರಾದ ಕೆ.ಎಚ್. ಮುನಿಯಪ್ಪ, ಎಚ್.ಕೆ. ಪಾಟೀಲ್, ಅಲ್ಲಂ ವೀರಭದ್ರಪ್ಪ, ಶಾಸಕ ಪ್ರಸಾದ್ ಅಬ್ಬಯ್ಯ ಮುಂತಾದವರು ಉಪಸ್ಥಿತರಿದ್ದರು.