ಚಿತ್ರದುರ್ಗ: ಮಹಿಳೆಯರ ಸಬಲೀಕರಣ ಕಾನೂನು ಸೇವಾ ಪ್ರಾಧಿಕಾರದ ಧ್ಯೇಯವಾಗಿದೆ. ಮಹಿಳೆಯರಲ್ಲಿ, ಜನಸಾಮಾನ್ಯರಲ್ಲಿ ಅಗತ್ಯ ಕಾನೂನುಗಳ ಹೆಚ್ಚಿನ ತಿಳಿವಳಿಕೆ ಇಲ್ಲ. ಈ ತಿಳಿವಳಿಕೆಯನ್ನು ನಮ್ಮ ಪ್ರಾಧಿಕಾರ ನೀಡುತ್ತಿದ್ದರೂ ಇನ್ನೂ ವ್ಯಾಪಕ ಅರಿವಿನ ಅಗತ್ಯವಿದೆ. ಅರ್ಹರಿಗೆ ಉಚಿತ ಸಲಹೆ, ಉಚಿತವಾಗಿ ವಕೀಲರನ್ನು ಒದಗಿಸುವುದು, ನ್ಯಾಯಾಲಯ ಶುಲ್ಕಗಳನ್ನು ಕಾನೂನು ಸೇವಾ ಪ್ರಾಧಿಕಾರದಿಂದ ಒದಗಿಸಲಾಗುತ್ತದೆ ಎಂದು 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶಿಲ್ಪಾರವರು ಚಿತ್ರದುರ್ಗದ ಚಿತ್ರಾ ಡಾನ್ ಬೋಸ್ಕೋ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಡೀಡ್ಸ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ತುಕಾರಾಮ ಎಕ್ಕಾರುರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಸಂಸ್ಥೆಯು ಹೆಣ್ಣು ಗಂಡು ಸಮಾನತೆ, ಮಹಿಳಾ ಕಾನೂನುಗಳ ಅರಿವು, ಮಹಿಳಾ ಪ್ರಕರಣಗಳ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿ ರಾಜ್ಯದ 8 ಜಿಲ್ಲೆಗಳಲ್ಲಿ ಪ್ಯಾರಾಲೀಗಲ್ ಕೋರ್ಸನ್ನು ನಡೆಸಿರುತ್ತದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ನೀಡಲು ಪೊಲಿಸ್ ಇಲಾಖೆ, ರಕ್ಷಣಾಧಿಕಾರಿ, ಸಾಂತ್ವನ, ಸ್ವಾಧಾರ, ಸಖಿ, ಕಾನೂನು ಸೇವಾ ಪ್ರಾಧಿಕಾರದಂತಹ ವ್ಯವಸ್ಥೆಗಳಿದ್ದು ಅವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ, ಜತೆಗೆ ಸ್ವಯಂ ಸೇವಾ ಸಂಸ್ಥೆಗಳೂ ಕೆಲಸ ಮಾಡುತ್ತಿವೆ. ಇವರೆಲ್ಲಾ ಒಟ್ಟಿಗೆ ಸೇರಿ ತಮ್ಮ ಉತ್ತಮ ಕೆಲಸಗಳು, ಸವಾಲುಗಳನ್ನು ಒಂದೆಡೆ ಸೇರಿ ಚರ್ಚಿಸುತ್ತಾ ಇನ್ನೂ ಉತ್ತಮೀಕರಿಸಿಕೊಳ್ಳಲು ಸಲಹೆ, ಯೋಜನೆಗಳನ್ನು ನಡೆಸಬೇಕೆನ್ನುವ ಉದ್ದೇಶದೊಂದಿಗೆ ಇಂತಹ ಸಭೆಯನ್ನು ಆಯೋಜಿಸಲಾಗಿದೆಯೆಂದರು.
ಲಿಂಗತ್ವ ಬಗ್ಗೆ ರಾಷ್ಟ್ರಮಟ್ಟದ ತರಬೇತುದಾರರಾದ ಚಿತ್ರದುರ್ಗದ ಅಂಬಿಕಾರವರು ಮಹಿಳಾ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡುತ್ತಾ, ಈಗಲೂ ಮಹಿಳೆಯರ ಪರಿಸ್ಥಿತಿ ಬದಲಾಗಿಲ್ಲ. ಮನೆಗೆಲಸವನ್ನು ಹೆಚ್ಚಾಗಿ ಮಹಿಳೆಯರೇ ಮಾಡಬೇಕಾದ ಪರಿಸ್ಥಿತಿ ಇದೆ. ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಮಹಿಳೆಯರಿಗೆ ಇಲ್ಲವಾಗಿದೆ. ಪುರುಷರೇ ಒಳ್ಳೊಳ್ಳೆಯ ಹುದ್ದೆಗಳಲ್ಲಿ ಹೆಚ್ಚು ಇದ್ದಾರೆ. ಓಡಾಟದ ಹಕ್ಕು-ಸ್ವಾತಂತ್ರ್ಯ ಮಹಿಳೆಯರಿಗಿಲ್ಲವಾಗಿದೆ. ಹೆಣ್ಮಕ್ಕಳ ಮೇಲೆ ಹಿಂಸೆ ಜಾಸ್ತಿಯಾಗುತ್ತಿದೆ. ಹೆಣ್ಣು ಗಂಡು ಅಸಮಾನತೆಯ ಪರಿಣಾಮ ಮತ್ತು ಸಮಾನತೆಯ ಅಗತ್ಯದ ಮಾಹಿತಿಯನ್ನು ಮಹಿಳೆಯರಿಗೆ ಪುರುಷರಿಗೆ ನೀಡಬೇಕಾಗಿದೆ. ಈ ಮೂಲಕ ಸಮಾನತೆ ತರಲು ಸಾಧ್ಯ ಎಂದರು.
ಪೊಲಿಸ್ ಅಧಿಕಾರಿಗಳಾದ ಕೀರ್ತನಾ ಮತ್ತು ಸುನೀತಾ ಮಾಹಿತಿ ನೀಡುತ್ತಾ ಠಾಣೆಗೆ ಪೋಕ್ಸೊ ಪ್ರಕರಣಗಳು ಜಾಸ್ತಿ ಬರುತ್ತಿವೆ. ಹೆಚ್ಚಾಗಿ ಜನರು ಬಾಲ್ಯವಿವಾಹ, ಲೈಂಗಿಕ ಅಪರಾಧಗಳ ಪ್ರಕರಣಗಳ ಬಗ್ಗೆ ದೂರು ಕೊಡುವುದಿಲ್ಲ. ಮಹಿಳಾ ದೌರ್ಜನ್ಯದ ದೂರುಗಳು ಬಂದಾಗ ಗಂಡ ಹೆಂಡತಿ, ಅವರ ಮನೆಯವರೊಂದಿಗೆ ಚರ್ಚಿಸಿ ಇತ್ಯರ್ಥಪಡಿಸುತ್ತೇವೆ. ಸಾಂತ್ವನ, ಸಖಿ, ಪ್ರಾಧಿಕಾರಕ್ಕೂ ಪ್ರಕರಣ ವರ್ಗಾಯಿಸುತ್ತೇವೆ ಎಂದರು. ಸ್ವಾಧಾರ ಕೇಂದ್ರದ ಸಂಧ್ಯಾರವರು ಮಾತನಾಡುತ್ತಾ ಕೇಂದ್ರಕ್ಕೆ ಹೆಚ್ಚಾಗಿ ಪ್ರಕರಣಗಳು ಪೊಲಿಸ್ ಕಚೇರಿಯಿಂದ ಬರುತ್ತವೆ. ಕೇಂದ್ರದ ಮುಖ್ಯ ಉದ್ದೇಶ ನೊಂದ ಮಹಿಳೆಯರಿಗೆ ಆಶ್ರಯ ಕೊಡುವುದಾಗಿದೆ ಎಂದರು.
ಅಧಿಕಾರಿಗಳಿಗೆ, ಸಂಸ್ಥೆಗಳಿಗೆ, ಜನರಿಗೆ ಲಿಂಗತ್ವ-ಮಹಿಳಾ ಕಾನೂನುಗಳ ತರಬೇತಿ ನಡೆಸುವುದು, ಮಹಿಳೆಯರಿಗೆ ಪೂರಕವಾದ ನ್ಯಾಯ ವ್ಯವಸ್ಥೆಗಳು ಮತ್ತು ಇಲಾಖೆಗಳು ಮಾನವೀಯತೆಯಿಂದ, ಲಿಂಗಸೂಕ್ಷ್ಮತೆಯಿಂದ, ನ್ಯಾಯಪರವಾಗಿ ಮತ್ತು ಶೀಘ್ರವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು, ಸಾಧ್ಯವಾದರೆ ಸ್ಥಳೀಯವಾಗಿಯೇ ಮಹಿಳಾಪರವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು, ಮಹಿಳೆಯರಿಗೆ ಪೂರಕವಾದ ಇಲಾಖೆಗಳು ಮತ್ತು ಸಂಸ್ಥೆಗಳು ಒಟ್ಟು ಸೇರಿ ಇಂತಹ ಸಮಾಲೋಚನಾ ಸಭೆಗಳನ್ನು ನಡೆಸುವುದು ಮುಂತಾದ ಸಲಹೆಗಳು ಬಂದವು.
ಡೀಡ್ಸ್ ಮಂಗಳೂರು, ಮಹಿಳಾ ಸಮಾಖ್ಯ ಚಿತ್ರದುರ್ಗ, ಚಿತ್ರದುರ್ಗ ಜಿಲ್ಲಾ ಮಹಿಳಾ ತರಬೇತುದಾರರ ಸಂಚಲನ, ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿತ್ರಾ ಡಾನ್ ಬೋಸ್ಕೋ ಸಂಸ್ಥೆ ಚಿತ್ರದುರ್ಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಿತ್ರದುರ್ಗ ಸಹಭಾಗಿತ್ವದಲ್ಲಿ ಕಾರ್ಯಕ್ರಮವು ನಡೆಯಿತು. ಮಹಿಳಾ ಸಮಾಖ್ಯದ ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಜೈರುನ್‌ಬಿ ಕಾರ್ಯಕ್ರಮ ನಿರೂಪಿಸಿದರು. ಚಿತ್ರಾ ಡಾನ್ ಬೋಸ್ಕೊ ಸಂಸ್ಥೆಯ ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಭಾರತಿ ಎಸ್ ಸ್ವಾಗತಿಸಿದರು, ಡೀಡ್ಸ್‌ನ ವಕಾಲತ್ತು ಅಧಿಕಾರಿ ಖುಶಿ ದೇಸಾಯಿ ಧನ್ಯವಾದವಿತ್ತರು.