ಹಾವೇರಿ: ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷದಲ್ಲಿ ರಾಜ್ಯದ ವೈದ್ಯಕೀಯ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಚಳಗೇರಿ ಗ್ರಾಮದ 4ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಶೇಖರಪ್ಪ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಉಕ್ರೇನ್‍ನಲ್ಲಿರುವ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಪ್ರಕಾರ, ಕಾರ್ಕಿವ್ ನ್ಯಾಷನಲ್ ಮೆಡಿಕಲ್ ಉನಿವರ್ಸಿಟಿಯಲ್ಲಿ ನಾಲ್ಕನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ನವೀನ್ ಶೇಖರಪ್ಪ ಜಿ ಅವರು ಕೆಲವು ದಿನಗಳಿಂದ ಅವರ ಫ್ಲಾಟ್ ಕೆಳಗಿರುವ ಬಂಕರ್ ನಲ್ಲಿ ವಾಸಿಸುತ್ತಿದ್ದರು.
ಅಗತ್ಯ ವಸ್ತುಗಳನ್ನು ತರಲು ಇಂದು ಬೆಳಿಗ್ಗೆ ಹೊರಗೆ ಹೋಗಿದ್ದರು. ಉಕ್ರೇನ್-ರಷ್ಯಾ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಬಾಂಬ್ ದಾಳಿಯಲ್ಲಿ ನವೀನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನವೀನ್ ತಂದೆಗೆ ಕರೆ ಮಾಡಿ ಮಾತನಾಡಿದ್ದಾರೆ. ಘಟನೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನವೀನ್ ಸಾವು ಬಹಳ ದುಃಖ ತರಿಸಿದೆ. 2-3 ದಿನಗಳಲ್ಲಿ ಪಾರ್ಥಿವ ಶರೀರವನ್ನು ತರಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಆಪರೇಷನ್ ಗಂಗಾ ಮೂಲಕ ಇಲ್ಲಿಯವರೆಗೆ ರಾಜ್ಯದ 49 ವಿದ್ಯಾರ್ಥಿಗಳನ್ನು ಯುದ್ಧಗ್ರಸ್ಥ ಉಕ್ರೇನ್ ನಿಂದ ಕರೆತರಲಾಗಿದೆ.