ಬೆಂಗಳೂರು, ಫೆ.28: ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸರ್ಕಾರಿ ನೌಕರರ ಸಮ್ಮೇಳನವನ್ನು ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿದರು.
ಸರ್ಕಾರಿ ನೌಕರರ ಸಮಸ್ಯೆಗಳನ್ನು ಅರಿತು 7ನೇ ವೇತನ ಆಯೋಗ ರಚಿಸಲಾಗಿದ್ದು, 6ನೇ ವೇತನ ಆಯೋಗವನ್ನು ನಮ್ಮ ಸರ್ಕಾರ ಜಾರಿಗೆ ತಂದಿತ್ತು. ಆ ಸಂದರ್ಭದಲ್ಲಿ ಸರ್ಕಾರಿ ನೌಕರರ ವಿರುದ್ಧವಿರುವುದಾಗಿ ನನ್ನ ಮೇಲೆ ಆರೋಪ ಮಾಡಿದ್ದರು. ಆದರೆ ನಾನೇ 6ನೇ ವೇತನ ಆಯೋಗವನ್ನು ರಚಿಸಿದ್ದೆ. ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಕೆಲಸವಾಗಬೇಕು.
6ನೇ ವೇತನ ಆಯೋಗದಲ್ಲಿ ಶೇ. 30ರಷ್ಟು ಫಿಟ್ಮೆಂಟ್ ಸೌಲಭ್ಯ ನೀಡಲು 10,500 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ. ಈಗ 7ನೇ ವೇತನ ಆಯೋಗದ ಮಧ್ಯಂತರ ವರದಿಯಂತೆ 17% ಹೆಚ್ಚಳ ಮಾಡಲಾಗಿತ್ತು. ಆಯೋಗದ ಅಂತಿಮ ವರದಿ ನೀಡಲು ಇನ್ನಷ್ಟು ಕಾಲಾವಕಾಶಬೇಕೆಂದು ಆಯೋಗದ ಆಧ್ಯಕ್ಷರು ಕೋರಿದ್ದು, ಮಾರ್ಚ್ 15 ರವರೆಗೆ ವರದಿ ನೀಡಲು ಸಮಯಾವಕಾಶ ನೀಡಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನಲೆ ಆಯೋಗದ ಅಂತಿಮ ವರದಿಯನ್ನು ಆದಷ್ಟು ಶೀಘ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ನಾನು ಸರ್ಕಾರಿ ನೌಕರರ ಪರವಾಗಿದ್ದೇನೆ ಎಂದು ಹೇಳಿದರು.