ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್‌ನ್ನು ಅಭಿವೃದ್ಧಿ ಪಡಿಸಲಾಗಿರುತ್ತದೆ.
ರೈತರು ಗೂಗಲ್ ಪ್ಲೇಸ್ಟೋರ್‌ನಿಂದ Kharif Farmer Crop Survey – 2022-23 ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ಆರ್ಥಿಕ ವರ್ಷ ಹಾಗೂ ಋತುವನ್ನು ನಂತರ ಆಧಾರ್‌ನಲ್ಲಿರುವಂತೆ ಮಾಹಿತಿ ದಾಖಲಿಸಿ, ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದರಿಂದ ಮೊಬೈಲ್ ಸಂಖ್ಯೆಗೆ ಓ.ಟಿ.ಪಿ ಬರಲಿದೆ. ಓ.ಟಿ.ಪಿ ಯನ್ನು ದಾಖಲಿಸಿ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಹಿಸ್ಸಾ, ಮಾಲೀಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಬೇಕು. ಸರ್ವೆ ನಂಬರ್‌ಗಳಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿ, ಫೋಟೋ ತೆಗೆದು ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು.
ಬೆಳೆ ಸಮೀಕ್ಷೆ ಮಾಹಿತಿಯನ್ನು ಪೃಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ಬೆಳೆ ವಿಮೆ ಯೋಜನೆ ಅನುಷ್ಠಾನ, ಋತುಮಾನವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ ಅನುಷ್ಠಾನ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬಳಸಲಾಗುತ್ತದೆ.
ರೈತರು ತಮ್ಮ ಜಮೀನಿನ ಬೆಳೆ ವಿವರವನ್ನು ಯಾವುದೇ ಲೋಪದೋಷಗಳಿಗೆ ಆಸ್ಪದವಿಲ್ಲದಂತೆ ತಾವೇ ದಾಖಲಿಸಲು ಸರ್ಕಾರದಿಂದ ಸುವರ್ಣಾವಕಾಶವನ್ನು ಕಲ್ಪಿಸಲಾಗಿದ್ದು, ಜಿಲ್ಲೆಯ ರೈತರು ನಿಗದಿತ ಅವಧಿಯೊಳಗೆ ಮೊಬೈಲ್ ಆ್ಯಪ್‌ನಲ್ಲಿ ತಮ್ಮ ಜಮೀನಿನ ಸರ್ವೆ ನಂಬರ್‌ವಾರು ಬೆಳೆ ವಿವರವನ್ನು ನಿಖರವಾಗಿ ದಾಖಲಿಸಿ, ಮುಂಗಾರು ಬೆಳೆ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.