ಬೆಂಗಳೂರು, ಫೆ.7: ಕೇಂದ್ರದ ‘ಭಾರತ್’ ಬ್ರ್ಯಾಂಡ್ ಅಕ್ಕಿಯನ್ನು ರೂ. 29/ಕೆಜಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮಂಗಳವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ರಾಜ್ಯದಲ್ಲಿ ‘ಭಾರತ್’ ಬ್ರ್ಯಾಂಡ್ ಅಕ್ಕಿ ಮಾರಾಟಕ್ಕೆ ಚಾಲನೆ ನೀಡಿದರು. ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಮತ್ತಷ್ಟು ನೆರವು ನೀಡುವ ನಿಟ್ಟಿನಲ್ಲಿ, ಇಡೀ ದೇಶದಲ್ಲಿ ಒಂದೇ ಬ್ರ್ಯಾಂಡಿನಡಿಯಲ್ಲಿ ಅಗತ್ಯ ಆಹಾರ ಸಾಮಗ್ರಿಗಳನ್ನು ರಿಯಾಯತಿ ದರದಲ್ಲಿ ನೀಡುವ ಮಹತ್ವಾಕಾಂಕ್ಷಿ ಉಪಕ್ರಮವನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದ್ದು ಶ್ಲಾಘನೀಯ. ಜನಸಾಮಾನ್ಯರ ದೈನಂದಿನ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆ ಪ್ರಾರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಈಗಾಗಲೇ ಕೇಂದ್ರ ಸರ್ಕಾರದ ವತಿಯಿಂದ ಬೇಳೆ, ಹಿಟ್ಟು ಕೂಡ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಸಬ್ಸಿಡಿ ಬೆಲೆಯಲ್ಲಿ ಲಭ್ಯವಾಗುತ್ತಿವೆ ಎಂದು ಹೇಳಿದರು. ಇದೀಗ, ಉತ್ತಮ ಗುಣಮಟ್ಟದ ಅಕ್ಕಿಯನ್ನು ಕೆಜಿಗೆ 29 ರೂ.ಗೆ ಮಾರಾಟ ಮಾಡಲಾಗುತ್ತಿದ್ದು, ಮಧ್ಯಮ ಮತ್ತು ಕಡಿಮೆ ಆದಾಯದ ಜನರಿಗೆ ಸಹಾಯವಾಗಲಿದೆ ಎಂದರು.
‘ಭಾರತ್’ ಅಕ್ಕಿಯು ಕೇಂದ್ರೀಯ ಭಂಡಾರ್, ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ, ಮತ್ತು ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ನ ಎಲ್ಲಾ ಮಳಿಗೆಗಳಲ್ಲಿ ಲಭ್ಯ ಮತ್ತು ಇತರ ಚಿಲ್ಲರೆ ಮಾರಾಟ ಮಳಿಗೆಗಳಿಗೆ, ಇಕಾಮರ್ಸ್ ಗಳಿಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಹೊರಡಿಸಿದ ಹೇಳಿಕೆ ತಿಳಿಸಿದೆ. ‘ಭಾರತ್’ ಬ್ರಾಂಡ್ ಅಕ್ಕಿಯನ್ನು 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.