ಮಿಜಾರು (ಮೂಡುಬಿದಿರೆ), ಫೆ. 27: ಎಲ್ಲರನ್ನು ಒಳಗೊಂಡ ಪ್ರಗತಿಯು ಸರ್ಕಾರದ ಗುರಿಯಾಗಿದ್ದು, ಅದರ ಕಾರ್ಯಸಾಧ್ಯತೆಯಲ್ಲಿ ಬಜೆಟ್ ಪರಿಣಾಮಕಾರಿಯೇ ಎಂಬುದು ಚರ್ಚೆಯ ವಿಚಾರವಾಗಿದೆ ಎಂದು ರಾಜ್ಯ ಯೋಜನಾ ಆಯೋಗದ ಮಾಜಿ ಸದಸ್ಯ, ಆರ್ಥಿಕ ತಜ್ಞ ಡಾ.ಜಿ.ವಿ. ಜೋಶಿ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿ ಹಾಗೂ ಆಳ್ವಾಸ್ ಕಾಲೇಜು ಸ್ನಾತಕೋತ್ತರ ವ್ಯವಹಾರ ಆಡಳಿತ ನಿರ್ವಹಣಾ ವಿಭಾಗವು (ಎಂಬಿಎ) ಹಮ್ಮಿಕೊಂಡಿದ್ದ ‘ಕೇಂದ್ರ ಬಜೆಟ್ 2023-24 ವಲಯವಾರು ವಿಶ್ಲೇಷಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರವು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ, ಹಸಿರು ಪ್ರಗತಿ, ಮೂಲಸೌಕರ್ಯ ಅಭಿವೃದ್ಧಿ, ಯುವಶಕ್ತಿಯ ಸದ್ಬಳಕೆ ಮತ್ತಿತರ ವಿಚಾರಗಳಿಗೆ ಒತ್ತು ನೀಡಿರುವುದಾಗಿ ಹೇಳಿದೆ. ಮಧ್ಯಮ ವರ್ಗದ ಜನರು ಪ್ರಜಾಪ್ರಭುತ್ವದ ಪ್ರಮುಖ ಆಧಾರವಾಗಿದ್ದಾರೆ. ಸರ್ಕಾರದ ಹಲವಾರು ಘೋಷಣೆಗಳು ನಮಗೆ ಆಕರ್ಷಕವಾಗಿ ಕೇಳಬಹುದು. ಆದರೆ, ಅದು ಅನುಷ್ಠಾನಗೊಂಡಿದೆಯೇ ಎಂಬುದು ನಮ್ಮೆಲ್ಲರ ಪ್ರಶ್ನೆ ಇದೊಂದು ಉತ್ತಮ ಚರ್ಚೆ ಎಂದರು.
ಬಜೆಟ್ ಒಳಗೊಳ್ಳುವ ಪ್ರಮುಖ ಹತ್ತು ಕ್ಷೇತ್ರಗಳನ್ನು ಗುರುತಿಸಿ, ಆಯಾ ಕ್ಷೇತ್ರದ ತಜ್ಞರನ್ನು ಕರೆಯಿಸಿ, ವಿಷಯ ಮಂಡಿಸಿ, ವಿದ್ಯಾರ್ಥಿಗಳೊಂದಿಗೆ ಸಮರ್ಪಕ ಚರ್ಚೆ ನಡೆಸಿ ವ್ಯವಸ್ಥಿತವಾಗಿ ಬಜೆಟ್ ಕುರಿತ ಚರ್ಚೆಯನ್ನು ಕರ್ನಾಟಕದಲ್ಲಿ ಆಯೋಜಿಸುತ್ತಿರುವ ಕಾಲೇಜು ಆಳ್ವಾಸ್ ಎಂದು ಅವರು ಶ್ಲಾಘಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಐಸಿಎಐ ಮಂಗಳೂರು ಘಟಕದ ಮಾಜಿ ಅಧ್ಯಕ್ಷ, ಲೆಕ್ಕ ಪರಿಶೋಧಕ ಎಸ್.ಎಸ್. ನಾಯಕ್ ಮಾತನಾಡಿ, ಹಣದುಬ್ಬರ, ಆರ್ಥಿಕ ಅಸ್ಥಿರತೆ, ಭೌಗೋಳಿಕ-ರಾಜಕೀಯ ಕಲಹಗಳು, ಕೋವಿಡ್ ಮತ್ತಿತರ ಪರಿಣಾಮಗಳ ನಡುವೆ ದೇಶದಲ್ಲಿ ಆರ್ಥಿಕ ಸುಸ್ಥಿರತೆಗೆ ನೀಡಿರುವ ಈ ಬಾರಿಯ ಬಜೆಟ್ ಟಾನಿಕ್‌ನಂತಿದೆ ಎಂದರು.
ತಾವೇ ಬರೆದ ಚುಟುಕುಗಳನ್ನು ವಾಚಿಸಿದ ಅವರು, ಹೊಸ ಶಿಕ್ಷಣ ನೀತಿಯ ಪ್ರಕ್ರಿಯೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯು ದಶಕದ ಹಿಂದೆಯೇ ಜಾರಿ ಮಾಡಿದೆ ಎಂದರು. ಬಳಿಕ ‘ಬಜೆಟ್‌ನಲ್ಲಿ ಶಿಕ್ಷಣ’ದ ಕುರಿತು ಮಾತನಾಡಿದ ಅವರು, ಚೀನಾವು 68,500 ಕೋಟಿ ರೂಪಾಯಿ, ಶೇ 11ರಷ್ಟು ಜಿಡಿಪಿಯನ್ನು ಶಿಕ್ಷಣಕ್ಕೆ ನೀಡಿದರೆ ಭಾರತದಲ್ಲಿ ಕೇವಲ 3,700 ಕೋಟಿ ರೂಪಾಯಿ ಹಾಗೂ ಶೇ 2.9 ರಷ್ಟು ಜಿಡಿಪಿಯನ್ನು ಮೀಸಲಾಗಿದೆ. ಚೀನಾದ ಪ್ರತಿ 17 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು ಇದ್ದರೆ, ಭಾರತದಲ್ಲಿ ೩೫ ವಿದ್ಯಾರ್ಥಿಗಳಿಗೆ ಒಬ್ಬರಿದ್ದಾರೆ. ಯಾಕೆ ಚೀನಾವು ಭಾರತಕ್ಕಿಂತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ ಎಂದು ನಿಮಗೆ ಅರ್ಥವಾಗಬಹುದು ಎಂದರು. ಈ ನಡುವೆ, ಈ ಬಾರಿಯ ಬಜೆಟ್ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹಮ್ಮಿಕೊಂಡ ಯೋಚನೆ ಯೋಜನೆಗಳನ್ನು ವಿವರಿಸಿದರು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಪ್ರಾಂಶುಪಾಲ ಡಾ. ಜೋಸೆಫ್ ಮಾತನಾಡಿ, 2070ರ ವೇಳೆಗೆ ‘ನೆಟ್‌ಝೀರೊ’ ಸಾಧಿಸುವುದು ನಮ್ಮ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಜನರ ನಡವಳಿಕೆಯಲ್ಲಿ ಬದಲಾವಣೆ ಅಗತ್ಯ. ನೈಸರ್ಗಿಕ ಸಂಪನ್ಮೂಲಗಳ ಅವಲಂಬನೆ ಹೆಚ್ಚಾಗಬೇಕು ಎಂದರು. ಬಜೆಟ್‌ನಲ್ಲಿ ಕೇವಲ ಹೇಳಿಕೆ ಇದ್ದರೆ ಸಾಲದು, ಸತ್ವವೂ ಇರಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಿದಾಗ ಯಶಸ್ಸು ಪಡೆಯಲು ಸಾಧ್ಯ. ಕೋವಿಡ್ ಆರ್ಥಿಕತೆಯನ್ನು ಮಾತ್ರವಲ್ಲ, ತಾಳ್ಮೆಯನ್ನೂ ಕೆಡಿಸಿದೆ’ ಎಂದರು. ಸುಧಾರಿತ ಅಧ್ಯಯನಗಳ ರಾಷ್ಟ್ರೀಯ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಪ್ರಕಾಶ್ ಪನ್ನೀರಸೆಲ್ವಂ, ಜಾಗತಿಕವಾಗಿ ಭೌಗೋಳಿಕ ರಾಜಕೀಯವು ಬದಲಾಗುತ್ತಿದ್ದು, ದೇಶದ ಭದ್ರತೆಗೆ ಆತಂಕವು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕಿತ್ತು ಎಂದರು. ನಿಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಆಡಳಿತ ನಿರ್ವಹಣಾ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಡಾ. ಟಿ. ಮಲ್ಲಿಕಾರ್ಜುನಪ್ಪ ಮೂಲಸೌಕರ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದರು.
ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್‌ಎಂಇ)ಗಳ ಸಚಿವಾಲಯದ ಜಂಟಿ ನಿರ್ದೇಶಕ ದೇವರಾಜ್ ಕೆ., ಎಂಎಸ್‌ಎಂಇ ಕುರಿತು ಮಾತನಾಡಿದರು. ಮುಂಬೈಯ ಲೆಕ್ಕಪರಿಶೋಧಕ ಕರಣ್ ಕುಮಾರ್ ಮನ್ಸುಖಾನಿ, ವಿಧಿವಿಜ್ಞಾನ ಲೆಕ್ಕಪರಿಶೋಧಕ ಡಾ.ಎಸ್. ಗೋಪಾಲಕೃಷ್ಣ ಶರ್ಮ, ಆರ್ಥಿಕ ತಜ್ಞ ರಾಜೇಶ್ ರಾವ್, ಲೆಕ್ಕ ಪರಿಶೋಧಕ ಸಿಎ ಆನಂದ ತೀರ್ಥ ಜಿ, ಬ್ಯಾಂಕಿಂಗ್ ಸೆಕ್ಟರ್‌ನ ವೇಣು ರಾವ್ ದೇವಾ ಚರ್ಚೆಯಲ್ಲಿ ಪಾಲ್ಗೊಂಡರು. ಆಳ್ವಾಸ್ ವ್ಯವಹಾರ ಆಡಳಿತ ನಿರ್ವಹಣಾ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಪ್ರಿಯಾ ಸಿಕ್ವೇರಾ, ಕರ‍್ಯಕ್ರಮದ ಸಂಯೋಜಕ ಜಾನ್ಸನ್ ಫೆನಾಂಡೀಸ್ ಇದ್ದರು.
ಅದಾನಿ-ಅಂಬಾನಿ ಬಜೆಟ್ ಎಂಬ ಆರೋಪ ನಿಜವೇ? ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇನ್ನು ಇವಿಎಂ ವಾಹನಕ್ಕೆ ಹೇಗೆ ಉತ್ತೇಜನ ನೀಡುತ್ತೀರಿ? ವಂದೇ ಭಾರತ್ ರೈಲ್ವೆಯ ಗುರಿ ಸಾಧನೆ ಏಕೆ ಆಗಲಿಲ್ಲ? ಬಜೆಟ್‌ನಲ್ಲಿ ಘೋಷಿಸುವ ವಸತಿ ಯೋಜನೆಗಳು ಅನುಷ್ಠಾನಕ್ಕೆ ಏಕೆ ಬರುತ್ತಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿದರು.
ಈಗಿನ ಹಣದುಬ್ಬರವನ್ನು ನೋಡಿದರೆ, ಬಜೆಟ್‌ನಲ್ಲಿ ಕೃಷಿಗೆ ನೀಡಿದ ಅನುದಾನ ಕಡಿಮೆಯಾಗಿದೆ. ಇದಕ್ಕೆ ದೇಶದ ಹಿಂದಿನ ಆರ್ಥಿಕ ಸ್ಥಿತಿಗತಿಯೂ ಕಾರಣವಾಗಿರಬಹುದು ಎಂದು ಕೃಷಿಕ ಹಾಗೂ ಸಾಮಾಜಿಕ ಕಾರ್ಯಕರ್ತ ವಿಶ್ವೇಶ್ವರ ಭಟ್ ಬಂಗಾರಡ್ಕ ಹೇಳಿದರು. ಕನಸಿನಲ್ಲಿ ಅರಮನೆಯನ್ನು ಕಟ್ಟಬಹುದು. ಆದರೆ, ವಾಸ್ತವದಲ್ಲಿ ಸೂಕ್ತ ಆದ್ಯತೆಗಳು ಬೇಕು. ಗ್ರಾಮೀಣಾಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು. ‘ಕೇಂದ್ರ ಬಜೆಟ್ 2023-24 ವಿಶ್ಲೇಷಣಾ ಕರ‍್ಯಕ್ರಮದ ಹಿನ್ನಲೆಯಲ್ಲಿ ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು.
ಭಿತ್ತಿಚಿತ್ರ ಪ್ರದರ್ಶನದ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ – ಪ್ರಥಮ, ನಿಟ್ಟೆಯ ಜಸ್ಟೀಸ್ ಕೆ.ಎಸ್.ಹೆಗ್ಡೆ ವ್ಯವಹಾರ ಆಡಳಿತ ನಿರ್ವಹಣಾ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಗುಂಪು ಚರ್ಚೆಯಲ್ಲಿ ವಾಮಂಜೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು- ಪ್ರಥಮ, ಎ.ಜೆ. ವ್ಯವಹಾರ ಆಡಳಿತ ನಿರ್ವಹಣಾ ಕಾಲೇಜು- ದ್ವಿತೀಯ ಸ್ಥಾನ ಪಡೆಯಿತು. ಕಾರ‍್ಯಕ್ರಮವನ್ನು ವಿದ್ಯಾರ್ಥಿನಿ ಪ್ರೀತಿ ಶೆಟ್ಟಿ ನಿರೂಪಿಸಿ, ಸಹಾಯಕ ಪ್ರಾಧ್ಯಾಪಕಿ ಡಾ. ಕ್ಯಾಥ್ರಿನ್ ಅತಿಥಿಗಳನ್ನು ಪರಿಚಯಿಸಿ, ಸಹಾಯಕ ಪ್ರಾಧ್ಯಾಪಕ ನೀರಜ್ ರೈ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು.