ಅರಸೀಕೆರೆ, ಫೆ.24: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ಮಸೂದೆ ಬಗ್ಗೆ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ಶನಿವಾರ ಅರಸೀಕೆರೆಯಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಅವರು ಮಾಧ್ಯಮದರೊಂದಿಗೆ ಮಾತನಾಡಿದರು. ಆದಾಯ ಹೆಚ್ಚಿರುವ ದೇವಸ್ಥಾನಗಳಿಂದ ಕಡಿಮೆ ಆದಾಯವಿರುವ ಹಿಂದೂ ದೇವಾಲಯಗಳಿಗೆ ಬಳಸುವುದನ್ನು ವಿರೋಧಿಸುತ್ತಾರೆ. ಬೇರೆ ಯಾವ ಧರ್ಮದ ಧಾರ್ಮಿಕ ಕ್ಷೇತ್ರಗಳಿಗೂ ಇದನ್ನು ಬಳಸುವುದಿಲ್ಲ. ಬಿಜೆಪಿಗೆ ವಿಧಾನ ಪರಿಷತ್ತಿನಲ್ಲಿ ಬಹುಮತ ಇದೆ ಎಂದು ಮಸೂದೆ ಪಾಸಾಗದಂತೆ ಮಾಡಿದ್ದಾರೆ.
ಕಳೆದ ಬಾರಿ ಬಿಜೆಪಿ ಸರ್ಕಾರದ ವಿರುದ್ಧ 40% ಸರ್ಕಾರ ಎಂದು ಜಾಹೀರಾತು ನೀಡಿದ್ದಕ್ಕೆ ನನ್ನ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಸದರಾದ ರಾಹುಲ್ ಗಾಂಧಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯ ವಿಶೇಷ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಜನಪ್ರತಿನಿಧಿ ನ್ಯಾಯಾಲಯ ಆದೇಶ ನೀಡಿದ್ದು, ನಾವು ನಮ್ಮ ವಕೀಲರನ್ನು ನೇಮಿಸುತ್ತೇವೆ. ಅವರು ನ್ಯಾಯಾಲಯದಲ್ಲಿ ಸೂಕ್ತ ಉತ್ತರ ನೀಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಿದರೆ ಅಥವಾ ಪ್ರತಿಭಟನಾ ಜಾಹೀರಾತು ನೀಡಿದರೆ ಅದು ಅಪರಾಧವಾಗದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.