ಬೆಂಗಳೂರು, ಜೂ.17: ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆ ಲೀಟರ್ ಗೆ 3 ರೂ, ಡೀಸೆಲ್ ಬೆಲೆ 3.5 ರೂ ಹೆಚ್ಚಳ ಮಾಡಿದ ನಿರ್ಧಾರದ ವಿರುದ್ಧ ಬಿಜೆಪಿ ವತಿಯಿಂದ ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ. ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಪೆಟ್ರೋಲ್-ಡೀಸೆಲ್ ದರ ಆರಂಭವಷ್ಟೇ ಇನ್ನು ಈ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಗಳೂ ಗಗನಕ್ಕೇರಲಿದ್ದು, ಜನಸಾಮಾನ್ಯರು, ಕಾರ್ಮಿಕರು, ಬಡವರು, ರೈತರು ಹಾಗೂ ಮಧ್ಯಮ ವರ್ಗದವರು ಬೆಲೆ ಏರಿಕೆಯ ಚಕ್ರವ್ಯೂಹದಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ತಕ್ಷಣ ಈ ನಿರ್ಧಾರ ಹಿಂಪಡೆಯಬೇಕು ಎಂದರು.
ವಿರೋಧ ಪಕ್ಷ ನಾಯಕ ಆರ್. ಅಶೋಕ್, ಮಾಜಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಉಪಾಧ್ಯಕ್ಷ ಭೈರತಿ ಬಸವರಾಜ, ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಗೋಪಿನಾಥ್ ರೆಡ್ಡಿ, ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ರಘು, ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ, ಮುಂತಾದವರು ಭಾಗವಹಿಸಿದ್ದರು.