Home ಸುದ್ಧಿಗಳು ರಾಜ್ಯ ಇಡೀ ಜೀವನವನ್ನು ಸಂಘ ಮತ್ತು ಸಂಘಟನೆಗೆ ಸಮರ್ಪಿಸಿಕೊಂಡಿದ್ದ ಭಾನುಪ್ರಕಾಶ್ ಅವರು ಇಂದಿನ ಪೀಳಿಗೆಯ ರಾಷ್ಟ್ರ ಭಕ್ತರಿಗೆ...

ಇಡೀ ಜೀವನವನ್ನು ಸಂಘ ಮತ್ತು ಸಂಘಟನೆಗೆ ಸಮರ್ಪಿಸಿಕೊಂಡಿದ್ದ ಭಾನುಪ್ರಕಾಶ್ ಅವರು ಇಂದಿನ ಪೀಳಿಗೆಯ ರಾಷ್ಟ್ರ ಭಕ್ತರಿಗೆ ಮಾದರಿ: ವಿಜಯೇಂದ್ರ

106
0

ಬೆಂಗಳೂರು, ಜೂ.17: ವಿಧಾನ ಪರಿಷತ್ ಮಾಜಿ ಸದಸ್ಯರೂ ಸಂಘಟನೆಯ ಹಿರಿಯ ಮಾರ್ಗದರ್ಶಕರೂ ಆಗಿದ್ದ ಭಾನುಪ್ರಕಾಶ್ ಅವರ ಅನಿರೀಕ್ಷಿತ ಸಾವು ಸಂಘ ಪರಿವಾರ ಹಾಗೂ ಪಕ್ಷದ ಕಾರ್ಯಕರ್ತರ ವಲಯಕ್ಕೆ ಅತೀವ ಆಘಾತವನ್ನುಂಟು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಸಂಘಟನೆಯ ಕುರಿತು ಕಾಲ ಕಾಲಕ್ಕೆ ನನಗೆ ಸೂಕ್ತ ತಿಳುವಳಿಕೆ ನೀಡುತ್ತಿದ್ದ ಅವರ ಅಗಲಿಕೆ ವೈಯಕ್ತಿಕವಾಗಿ ನನಗೆ ಅಪಾರ ನೋವನ್ನುಂಟು ಮಾಡಿದೆ. ತಮ್ಮ ಇಡೀ ಜೀವನವನ್ನು ಸಂಘ ಮತ್ತು ಸಂಘಟನೆಗೆ ಸಮರ್ಪಿಸಿಕೊಂಡಿದ್ದ ಭಾನುಪ್ರಕಾಶ್ ಜೀ ಅವರು ಇಂದಿನ ಪೀಳಿಗೆಯ ರಾಷ್ಟ್ರ ಭಕ್ತರಿಗೆ ಮಾದರಿಯಾಗಿದ್ದರು. ಅವರ ಕುಟುಂಬವೂ ಸಹ ಸಂಘದ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿತ್ತು, ತಮ್ಮ ಕುಟುಂಬ ಬೇರೆಯಲ್ಲ ಸಂಘ ಪರಿವಾರ ಬೇರೆಯಲ್ಲ ಎಂದು ತಮ್ಮ ಜೀವನ ಶೈಲಿಯನ್ನು ತ್ಯಾಗದ ಪ್ರತಿರೂಪವಾಗಿ ಸಮರ್ಪಿಸಿಕೊಂಡು ಕ್ರಿಯಾಶೀಲರಾಗಿದ್ದ ಅವರು ವಿಧಾನಪರಿಷತ್ತಿನ ಸದಸ್ಯರಾಗಿಯೂ ಪ್ರಜಾಪ್ರಭುತ್ವದ ಪಾವಿತ್ರ್ಯತೆಯನ್ನು ಪಾರದರ್ಶಕವಾಗಿ ಎತ್ತಿ ಹಿಡಿಯಲು ಪ್ರಾಮಾಣಿಕವಾಗಿ ಪರಿಶ್ರಮಿಸಿದ್ದರು.

ಭಾನುಪ್ರಕಾಶ್ ಅವರು ಸಂಘಟನೆ ಹಾಗೂ ಹೋರಾಟದ ಸಮಯದಲ್ಲೇ ಅಸುನೀಗುವ ಮೂಲಕ ಸಂಘ ಪರಿವಾರದ ತ್ಯಾಗ ಬಲಿದಾನಗೈದ ಮಹಾನ್ ವ್ಯಕ್ತಿಗಳ ಸಾಲಿಗೆ ಸೇರ್ಪಡೆಗೊಂಡು ಇತಿಹಾಸ ಪುಟಗಳಲ್ಲಿ ಸೇರಿ ಹೋದರು. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ನೀಡಲೆಂದು ದೇವರಲ್ಲಿ ಪ್ರಾರ್ಥಿಸುವೆ. ಒಬ್ಬ ಅಪರೂಪದ ಸರಳ, ಸಜ್ಜನ, ಪರಿಶುಭ್ರ ವ್ಯಕ್ತಿತ್ವದ ಭಾನುಪ್ರಕಾಶ್ ಅವರ ಇನ್ನಿಲ್ಲದಿರುವಿಕೆ ಪರಿವಾರ ಹಾಗೂ ಪಕ್ಷದ ವಲಯದಲ್ಲಿ ಶೂನ್ಯ ಆವರಿಸಲು ಕಾರಣವಾಗಿದೆ. ಅವರು ನಮ್ಮೊಂದಿಗೆ ಭವಿಷ್ಯತ್ತಿನಲ್ಲಿ ಭೌತಿಕವಾಗಿ ಇಲ್ಲದಿರಬಹುದು, ಆದರೆ ಅವರು ನೀಡಿದ ಪ್ರೇರಣೆ, ಹೋರಾಟ, ಮಾರ್ಗದರ್ಶನ ಸದಾ ನಮ್ಮ ಬೆನ್ನಿಗೆ ನಿಂತು ಭವಿಷ್ಯತ್ತಿನಲ್ಲೂ ಪ್ರೇರಣೆಯ ಶಕ್ತಿಯಾಗಿರಲಿದೆ ಎಂದು ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.