ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಯಡಾಡಿ-ಮತ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೈಗುಳಿ-ಯಕ್ಷಿ ದೈವಸ್ಥಾನವಿರುವ ಶಿರಿಮಠದ ಗದ್ದೆಯಲ್ಲಿನ ಶಾಸನವನ್ನು ದಿನೇಶ್ ಪುತ್ರನ್ ವಿಠಲವಾಡಿ ಕುಂದಾಪುರ ಇವರ ಮಾಹಿತಿಯ ಮೇರೆಗೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ ಉಡುಪಿ (ಎ.ಒ.ಎಂ. ನ ಅಂಗಸಂಸ್ಥೆ) ಇದರ ಅಧ್ಯಯನ ನಿರ್ದೇಶಕ ಎಸ್.ಎ. ಕೃಷ್ಣಯ್ಯ ಅವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿರುತ್ತಾರೆ.
ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು 5 ಅಡಿ ಎತ್ತರ ಮತ್ತು 2 ಅಡಿ ಅಗಲವನ್ನು ಹೊಂದಿದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗವನ್ನು ಪೂಜಿಸುತ್ತಿರುವ ವ್ಯಕ್ತಿ ಮತ್ತು ಇದರ ಇಕ್ಕೆಲಗಳಲ್ಲಿ ದೀಪ, ನಂದಿ, ರಾಜಕತ್ತಿ ಹಾಗೂ ಸೂರ್ಯ-ಚಂದ್ರರ ಕೆತ್ತನೆಯಿದೆ.
ಶಾಸನದ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು, ಶಾಸನವು ಶಕವರುಷ 1278 ನೆಯ ದುರ್ಮುಖಿ ಸಂವತ್ಸರದ ಭಾದ್ರಪದ ಶುದ್ಧ 5 ಗುರುವಾರ ಅಂದರೆ ಕ್ರಿಸ್ತಶಕ 1356ರ ಕಾಲಮಾನಕ್ಕೆ ಸೇರಿದ್ದಾಗಿದೆ.
ಶಾಸನದಲ್ಲಿ ವಿಜಯನಗರ ದೊರೆ ವೀರ ಬುಕ್ಕಣ್ಣ ಒಡೆಯರ ಉಲ್ಲೇಖವಿದ್ದು ಈ ಸಂದರ್ಭದಲ್ಲಿ ಬಾರಕೂರು ರಾಜ್ಯವನ್ನು ಮಹಾಪ್ರಧಾನ ಮಲೆಯ ದಂಡನಾಯಕ ಆಳ್ವಿಕೆ ಮಾಡುತ್ತಿದ್ದ ಎಂದು ತಿಳಿಯುತ್ತದೆ. ಮುಖ್ಯವಾಗಿ ಈ ಶಾಸನವು ಬ್ರಾಹ್ಮಣರಿಗೆ ನೀಡಿದ ಭೂದಾನದ ಬಗ್ಗೆ ಹಾಗೆಯೇ ದಾನದ ಭೂಮಿಯ ಚತುಸ್ಸೀಮೆಗಳ ವಿವರವನ್ನು ದಾಖಲಿಸುತ್ತದೆ. ಶಾಸನದಲ್ಲಿ ಕೋಟೀಸ್ವರ ದೇವರ ಮತ್ತು ಹರ ಮಹಾದೀಸ್ವರ ದೇವರ ಉಲ್ಲೇಖಗಳು ಕಂಡುಬರುತ್ತದೆ.
ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಕಿಶನ್ ಕುಮಾರ್ ಮೂಡುಬೆಳ್ಳೆ, ಹೇಮಾ ಶೆಟ್ಟಿ ಸಹಕಾರ ನೀಡಿರುತ್ತಾರೆ.