ವಿದ್ಯಾಗಿರಿ, ಫೆ.20: ಯುವಜನತೆಗೆ ಸೂಕ್ತ ಪ್ರಾತಿನಿಧ್ಯ ದೊರೆಯದ ಕಾರಣ ನಿರುದ್ಯೋಗ ಮತ್ತಿತ್ತರ ಸಮಸ್ಯೆಗಳು ಉಲ್ಬಣಿಸುತ್ತಿವೆ. ರಾಜಕೀಯದಲ್ಲಿ ಯುವಜನತೆಗೆ ಸಮಾನ ಹಾಗೂ ಸಮರ್ಪಕ ಪ್ರಾತಿನಿಧ್ಯ ನೀಡಬೇಕು ಎಂದು ಲೇಖಕ ಸುಧಾಂಶು ಕೌಶಿಕ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ತಾವು (ಸುಧಾಂಶು ಕೌಶಿಕ್) ಬರೆದ ‘ದ ಫ್ಯೂಚರ್ ಈಸ್ ಅವರ್ಸ್’ ಕೃತಿಯ ಸ್ಥಳೀಯ ಅನಾವರಣ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ದೇಶದ ಹಿರಿಯ ನಾಯಕರನ್ನು ನಾವು ಯುವ ಪ್ರತಿನಿಧಿ ಎನ್ನುತ್ತೇವೆ. ಆದರೆ, ನಿಜವಾಗಿಯೂ ಯುವಜನತೆಗೆ ಪ್ರಾತಿನಿಧ್ಯ ನೀಡಿದ್ದೇವೆಯೇ? ಎಂದು ಪ್ರಶ್ನಿಸಿದ ಅವರು, ಕೂದಲು ಬಿಳಿಯಾದರೆ ಮಾತ್ರ ಬುದ್ಧಿವಂತರಲ್ಲ. ಭಗತ್ ಸಿಂಗ್, ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರು 21 ರಿಂದ 24 ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದರು. ಕೇವಲ ವಯಸ್ಸಿನಿಂದ ಯಾರನ್ನೂ ಅಳೆಯಬಾರದು ಎಂದರು. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿರುವ ಮೇಲ್ವರ್ಗ, ಸುಶಿಕ್ಷಿತ, ದೊಡ್ಡ ಮನೆತನ, ಮೇಲ್ಜಾತಿ, ಎತ್ತರದ ವ್ಯಕ್ತಿ ಎಂಬಿತ್ಯಾದಿ ಆದ್ಯತೆ-ಸವಲತ್ತುಗಳನ್ನು ನಾನು ಹೊಂದಿದ್ದೆ. ಆದರೆ, ಅಮೆರಿಕಾದಲ್ಲಿ ನನ್ನನ್ನು ಬಿಳಿಯರು ನೋಡಿದ ದೃಷ್ಟಿಕೋನವೇ ಬೇರೆಯೇ ಇತ್ತು. ಆಗ ನಮ್ಮ ದೇಶದಲ್ಲಿ ಸಾಮಾಜಿಕ ಆದ್ಯತೆ- ಸೌಲಭ್ಯ ವಂಚಿತ ಜನರ ನೆನಪಾಯಿತು. ಈ ಪೈಕಿ ಕೇವಲ ಕಿರಿ ವಯಸ್ಸಿನವರು ಎಂಬ ಕಾರಣಕ್ಕೆ ನಿರ್ಲಕ್ಷ್ಯಕ್ಕೆ ಒಳಗಾಗುವ ಯುವಜನತೆ ಬಗ್ಗೆಯೂ ಮನಕಲುಕಿತು ಎಂದರು. ಸಮಾಜವು ಹೆಣ್ಣಿಗೆ ಹೇಗೆ ಕಟ್ಟುಪಾಡು ಹಾಕಿದೆಯೋ? ಅದೇ ಮಾದರಿಯಲ್ಲಿ ಯುವಜನತೆಗೆ ಪ್ರಾತಿನಿಧ್ಯವನ್ನೂ ವಂಚಿಸಿದೆ. ಇದನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತದೆ. ನೀವು ಅವುಗಳನ್ನು ಮೀರಬೇಕು ಎಂದ ಅವರು, ಅಮೆರಿಕದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಅವರು ಶೋಷಿತರ ಹಕ್ಕುಗಳನ್ನು ಕೇಳಿದಾಗ ಗೂಂಡಾ ಎಂಬಂತೆ ಬಿಂಬಿಸಲಾಯಿತು. ಆದರೆ, ಬಳಿಕ ಅವರಿಗೆ ನೋಬೆಲ್ ನೀಡಿ ಜಗತ್ತು ಗೌರವಿಸಿತು ಎಂದರು.
ಪಡೆದ ಶಿಕ್ಷಣ ಅಥವಾ ಪದವಿಗಳೇ ರಾಜಕೀಯದ ಅರ್ಹತೆ ಅಲ್ಲ. ಬದ್ಧತೆ ಬಹುಮುಖ್ಯ ಎಂದರು. ದೇಶದಲ್ಲಿ 67 ಕೋಟಿ ಜನ ಯುವಜನತೆ ಇದ್ದರೂ, ಪ್ರಸ್ತುತ ೧೭ನೇ ಲೋಕಸಭೆಯಲ್ಲಿ ಸಂಸದರ ಸರಾಸರಿ ವಯಸ್ಸು 61 ರಿಂದ 64. ಯುವಜನತೆ ರಾಜಕೀಯದಲ್ಲಿ ಆಸಕ್ತಿ ಹೊಂದಿಲ್ಲ ಎನ್ನುವುದು ಸುಳ್ಳು. ಅವರಿಗೆ ಕಾನೂನು ಮತ್ತು ಸಮಾಜವು ಅವಕಾಶ ನೀಡಬೇಕು. ವಯಸ್ಸು ಮತ್ತು ಅನುಭವಕ್ಕೆ ಸಂಬಂಧವಿಲ್ಲ ಎಂದರು. ದೇಶದಲ್ಲಿ 21.5 ವರ್ಷದಲ್ಲಿ ನ್ಯಾಯಾಧೀಶ, ಐಎಎಸ್ ಅಧಿಕಾರಿ, ಸೈನಿಕ ಸೇರಿದಂತೆ ಎಲ್ಲವೂ ಆಗಲು ಅವಕಾಶ ನೀಡಲಾಗಿದೆ. ಆದರೆ, ಸಂಸದನಾಗಲು ಸಾಧ್ಯವಿಲ್ಲ ಎಂಬುದೇ ಅತಾರ್ಕಿಕ ಎಂದರು. ದೇಶದಲ್ಲಿ 21.6 ಕೋಟಿ ಮತದಾರರು 18 ರಿಂದ 29 ವರ್ಷ ವಯಸ್ಸಿನೊಳಗಿನವರು. ಆದರೆ, ಅವರ ಪ್ರತಿನಿಧಿ ಸಂಸತ್ತಿನಲ್ಲಿ ಇಲ್ಲ. ತಿರುವನಂತಪುರದ ಸ್ಥಳೀಯಾಡಳಿತ ಸಂಸ್ಥೆಯಲ್ಲಿ 21 ವರ್ಷದ ಯುವತಿ ಆಡಳಿತ ನಿರ್ವಹಿಸಬಹುದಾದರೆ, ಸಂಸದರಾಗಲು ಏಕೆ ಅವಕಾಶ ಇಲ್ಲ ಎಂದು ಪ್ರಶ್ನಿಸಿದರು. ಯುವಜನತೆ ಕಲಿಯುವ ಅಥವಾ ವೃತ್ತಿ ಮಾಡುವ ಸ್ಥಳದಿಂದ ಮತದಾನ ಮಾಡಲು ಅವಕಾಶ ಕಲ್ಪಿಸಬೇಕು. ದೇಶದಲ್ಲಿ ಯುವಜನತೆ ಸಂಖ್ಯೆ ಹೆಚ್ಚಿದ್ದು, ಅವರಿಗೆ ಅವಕಾಶ ಕಲ್ಪಿಸಬೇಕು
ಎಂದರು. ಅಧಿಕಾರ, ಆದ್ಯತೆಯನ್ನು ಕೇವಲ ವಯಸ್ಸಿನ ಆಧಾರದಲ್ಲಿ ಹಿರಿಯರಿಗೆ ನೀಡುವ ‘ಜೆರೊಂಟೊಕ್ರೆಸಿ’ಯನ್ನು ಹೊಡೆದೊಡಿಸಬೇಕು ಎಂದರು.
ಆಳ್ವಾಸ್‌ನ ಹಿರಿಯ ವಿದ್ಯಾರ್ಥಿ ಮತ್ತು ಖ್ಯಾತ ನಟಿ ಆಶಾ ಭಟ್ ಮಾತನಾಡಿ, ಬುದ್ಧಿಮತ್ತೆ ಪ್ರಮಾಣ, ಭಾವನಾತ್ಮಕ ಪ್ರಮಾಣದ ಹಾಗೆ ಪ್ರತಿಕೂಲ ಪ್ರಮಾಣವು ನಿಮ್ಮಲ್ಲಿ ಇರಬೇಕು. ನೀವು ಯಾವುದೇ ಪರಿಸ್ಥಿತಿ ಬಂದರೂ ವಿಚಾರ ಮಾಡಿ ಸಮಸ್ಯೆ ನಿಭಾಯಿಸಿಕೊಳ್ಳಬೇಕು ಎಂದರು. ಯಾವುದೇ ವಿಚಾರದಲ್ಲಿ ಸಣ್ಣದು- ದೊಡ್ಡದು ಎಂಬ ತಾರತಮ್ಯ ಸಲ್ಲ. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಬದ್ಧತೆಯಿಂದ ನಿಭಾಯಿಸಿದಾಗ ಯಶಸ್ಸು ಸಾಧ್ಯ ಎಂದರು. ವಿಜ್ಞಾನ ವಿದ್ಯಾರ್ಥಿಗಳು ಬರೀ ಓದಲು ಸೀಮಿತ ಅಲ್ಲ. ನಿಮ್ಮ ಬೇಡಿಕೆ ಅಥವಾ ಅಭಿಪ್ರಾಯವನ್ನು ವಿನಯದಿಂದ ಹಿರಿಯರ ಮುಂದೆ ಇಡಿ. ಸಾಧಿಸಲು ಪರಿಶ್ರಮ ಪಡಿ. ಅಂತಹ ಕಾರಣಕ್ಕಾಗಿ ನಾನು ಭದ್ರಾವತಿಯಿಂದ ಆಳ್ವಾಸ್‌ಗೆ ಬಂದಿದ್ದು, ಹೆಮ್ಮೆ ಇದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಅವಕಾಶವು ಜವಾಬ್ದಾರಿಯ ಜೊತೆ ಬರುತ್ತದೆ. ಆಶಾ ಭಟ್ ವಿದ್ಯಾರ್ಥಿ ಜೀವನದಲ್ಲೇ ಮಾದರಿಯಾಗಿದ್ದರು. ಅವರು ನಮ್ಮ ಹೆಮ್ಮೆಯ ಹಳೆ ವಿದ್ಯಾರ್ಥಿನಿ. ಯಾರೂ ಹೆಣ್ಣು- ಗಂಡು ಭೇದ ಮಾಡಬೇಡಿ ಎಂದರು. ಪ್ರಾಂಶುಪಾಲ ಡಾ.ಕುರಿಯನ್ ಇದ್ದರು. ಸಹಾಯಕ ಪ್ರಾಧ್ಯಾಪಕ ಸಾತ್ವಿಕ್ ಸಂವಾದ ನಡೆಸಿಕೊಟ್ಟರು. ಪ್ರತೀಕ್ಷಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರಾದ ಧನುಶ್ರೀ ಆರ್ ಮತ್ತು ದಿಯಾ ಅವರನ್ನು ಸನ್ಮಾನಿಸಲಾಯಿತು.