ಮಣಿಪಾಲ: ಪ್ರಪಂಚದಾದ್ಯಂತ ಪಾರ್ಶ್ವವಾಯು ಕಾಯಿಲೆ ಕುರಿತು ಅರಿವು ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 29 ರಂದು ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುತ್ತದೆ. ಯಾರಿಗಾದರೂ ಪಾರ್ಶ್ವವಾಯು ಉಂಟಾದಾಗ, ಹಾದುಹೋಗುವ ಪ್ರತಿ ಸೆಕೆಂಡ್ ನಿರ್ಣಾಯಕವಾಗಿರುತ್ತದೆ. ಮೆದುಳಿನ ಅಂಗಾಂಶ ಮತ್ತು ಲಕ್ಷಾಂತರ ನ್ಯೂರಾನ್‌ಗಳ ಕಾರ್ಯಕ್ಷಮತೆ ಕಡಿಮೆಯಾಗಲು ಪ್ರಾರಂಭಿಸಿದಾಗ, ಸಮಯವು ಹೆಚ್ಚು ಅಮೂಲ್ಯವಾಗಿರದೇ ಇರಲು ಸಾಧ್ಯವಿಲ್ಲ. ನಮ್ಮ ಅಮೂಲ್ಯ ಸಮಯದ ಅಭಿಯಾನವು ಪಾರ್ಶ್ವವಾಯು ಚಿಹ್ನೆಗಳ ಅರಿವು ಮತ್ತು ತುರ್ತು ವೈದ್ಯಕೀಯ ಆರೈಕೆಗೆ ಸಕಾಲಿಕ ಪ್ರವೇಶದ ಪ್ರಯೋಜನಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಇದರ ಅಂಗವಾಗಿ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ನರವಿಜ್ಞಾನ ವಿಭಾಗದ ವತಿಯಿಂದ ಪಾರ್ಶ್ವವಾಯು ಜಾಗೃತಿ ಮತ್ತು ಉಚಿತ ತಪಾಸಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕೆ.ಎಂ.ಸಿ ಡೀನ್ ಡಾ. ಶರತ್ ಕುಮಾರ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇತ್ತೀಚಿನ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರಿಗೆ ತಮ್ಮ ಜೀವಮಾನದಲ್ಲಿ ಪಾರ್ಶ್ವವಾಯು ಆಗುವ ಸಾಧ್ಯತೆ ಇದೆ. ಅಂಕಿ ಅಂಶಗಳ ಪ್ರಕಾರ ಪಾರ್ಶ್ವವಾಯು ಹೊಂದಿದ ಶೇ 25 ಜನರು ಒಂದು ತಿಂಗಳಲ್ಲಿ ಮರಣ ಹೊಂದುತ್ತಾರೆ. ಶೇ 35 ಜನ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುತ್ತಾರೆ ಮತ್ತು ಉಳಿದ ಜನರಲ್ಲಿ ಕೆಲವರಿಗೆ ಪಾರ್ಶ್ವವಾಯು ಆಗಿದೆ ಎಂಬುದೇ ಗೊತ್ತಾಗುವುದಿಲ್ಲ.
ಆದ್ದರಿಂದ ಪಾರ್ಶ್ವವಾಯುಗೆ ತುತ್ತಾದ ತಕ್ಷಣ ನರರೋಗ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಪಡಿಸಬಹುದು. ಈ ಸಂದರ್ಭದಲ್ಲಿ ಪ್ರತಿ ನಿಮಿಷ ಕೂಡ ಅಮೂಲ್ಯವಾದದ್ದು. ಆದ್ದರಿಂದ ಈ ವರ್ಷದ ಧ್ಯೇಯವಾಕ್ಯ ’ನಿಮಿಷಗಳು ಜೀವ ಉಳಿಸಬಹುದು’ ಎಂದರು.
ಗೌರವ ಅತಿಥಿಯಾಗಿದ್ದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ಮಾತನಾಡುತ್ತಾ, ಐ ಸಿ ಎಂ ಆರ್ ವರದಿ ಪ್ರಕಾರ ಭಾರತದಲ್ಲಿ ಮನುಷ್ಯರ ಸಾವಿಗೆ ಪಾರ್ಶ್ವವಾಯು 4ನೇ ದೊಡ್ಡ ಕಾರಣ ಹಾಗೂ ಶಾಶ್ವತ ಅಂಗವೈಕಲ್ಯಕ್ಕೆ 5ನೇ ದೊಡ್ಡ ಕಾರಣ.
ಆದ್ದರಿಂದ ಆರಂಭದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡಯಬೇಕು. ಇಂದು ಮತ್ತು ನಾಳೆ ಆಸ್ಪತ್ರೆಯಲ್ಲಿ ಉಚಿತವಾಗಿ ಪಾರ್ಶ್ವವಾಯು ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಮುಖ್ಯ ನಿರ್ವಹಣಾ ಅಧಿಕಾರಿ ಸಿ.ಜಿ ಮುತ್ತಣ್ಣ, ನರರೋಗ ವಿಭಾಗದ ಮುಖ್ಯಸ್ಥರಾದ ಡಾ. ಅಪರ್ಣ ಆರ್ ಪೈ ಸ್ವಾಗತಿಸಿ, ನರರೋಗ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಗಿರೀಶ್ ಮೆನನ್ ಆರ್ ಕಾರ್ಯಕ್ರಮದ ಅವಲೋಕನ ನೀಡಿದರು. ಡಾ. ನಿಶಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.