ಉಡುಪಿ: ಉತ್ತಮ ಆಹಾರ ಪದ್ಧತಿ ಮತ್ತು ಆಚಾರ ವಿಚಾರಗಳೇ ನಮ್ಮನ್ನು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರನ್ನಾಗಿ ಮಾಡುತ್ತದೆ. ಸಕಾರಾತ್ಮಕ ಆಲೋಚನೆಗಳೇ ಉತ್ತಮ ಭವಿಷ್ಯವನ್ನು ನಿರ್ಮಿಸುತ್ತದೆ ಎಂದು ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ವಿಜಯ ಬಲ್ಲಾಳ್ ಹೇಳಿದರು.
ಅವರು ಇಂದು ನಗರದ ರೆಡ್‌ಕ್ರಾಸ್ ಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗ, ಧ್ಯಾನ, ವ್ಯಾಯಾಮದಂತಹ ಸಕಾರಾತ್ಮಕ ಚಿಂತನೆ ಹಾಗೂ ಚಟುವಟಿಕೆಗಳಿಂದ ಮಾತ್ರ ಆರೋಗ್ಯ ವೃದ್ಧಿಯಾಗುತ್ತದೆ. ನಾವು ಆರೋಗ್ಯವಂತರಾಗುವುದರ ಜೊತೆಗೆ ನಮ್ಮ ಸುತ್ತಮುತ್ತಲಿನ ಜನ ಕೂಡ ಆರೋಗ್ಯವಂತರಾಗಲು ನೆರವಾಗಬೇಕು. ಇಂದಿನ ದಿನಗಳಲ್ಲಿ ಯುವಜನತೆ ಜಂಕ್‌ಫುಡ್‌ಗಳಿಗೆ ಮರುಳಾಗದೆ ಮನೆಯಲ್ಲಿಯೇ ತಯಾರಿಸಿದ ಉತ್ತಮ ಆಹಾರವನ್ನು ಸೇವಿಸುವುದು ಅತ್ಯಗತ್ಯ ಎಂದು ತಿಳಿಸಿದರು.
ನಮ್ಮ ದಿನನಿತ್ಯದ ಜೀವನ ಶೈಲಿಯಲ್ಲಿ ಉತ್ತಮ ವಿಚಾರಗಳನ್ನು ಅಳವಡಿಸಿಕೊಂಡು ಭವಿಷ್ಯವನ್ನು ಬದಲಾಯಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ವಾಣಿಯಂತೆ ನಮಗೆ ಬೇಕಾಗಿರುವುದು ಕಬ್ಬಿಣದಂತಹ ಸ್ನಾಯುಗಳು ಮತ್ತು ಉಕ್ಕಿನ ನರವ್ಯೂಹ ಹೊಂದಿರುವ ಯುವಕರು ಎಂದು ಅವರು ಹೇಳಿದರು.
ಗೌರವ ಅತಿಥಿಯಾಗಿ ಆಗಮಿಸಿದ ಐ.ಆರ್.ಸಿ.ಎಸ್ ಬ್ಲಡ್ ಬ್ಯಾಂಕ್‌ನ ಮುಖ್ಯ ನಿರ್ದೇಶಕ ಎಸ್. ಜಯಕರ ಶೆಟ್ಟಿ ಮಾತನಾಡಿ, ಇಂದಿನ ಒತ್ತಡದ ಜೀವನದಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಆರೋಗ್ಯದ ಕಡೆಗೆ ಗಮನಹರಿಸುವುದು ಅತೀ ಅಗತ್ಯವಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ನಡೆಸುತ್ತಿರುವ ಸಮಾಜಮುಖಿ ಕೆಲಸಗಳನ್ನು ಶ್ಲಾಘಿಸಿದರು.
ವಾರ್ತಾಧಿಕಾರಿ ಬಿ. ಮಂಜುನಾಥ್ ಮಾತನಾಡಿ, ಆಧುನಿಕ ಜೀವನ ಶೈಲಿಯಿಂದ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಸೂಕ್ತ ಗಮನಹರಿಸಿ, ಅನಾರೋಗ್ಯದಿಂದ ನಾವು ಪಾರಾಗಬೇಕು ಎಂದರು. ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ. ಅಶೋಕ್ ವೈ.ಜಿ ಮಾತನಾಡಿ, ಉತ್ತಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಸ್ಥೆಗಳಿಗೆ ಮಾಸ್ಕ್ ಹಾಗೂ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.
ರೆಡ್‌ಕ್ರಾಸ್ ಸಂಸ್ಥೆಯ ಖಜಾಂಜಿ ರಮಾದೇವಿ, ಡಾ. ಜಿ. ಶಂಕರ್ ಮಹಿಳಾ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ಆರೋಗ್ಯ ದಿನಾಚರಣೆಯು 1950 ರಲ್ಲಿ ಜಾರಿಗೆ ಬಂದಿದ್ದು, ಪ್ರತೀ ವರ್ಷ ಜಿಲ್ಲೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು. ವಿ.ಜಿ ಶೆಟ್ಟಿ ನಿರೂಪಿಸಿ, ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ರತ್ನಾಕರ ಶೆಟ್ಟಿ ವಂದಿಸಿದರು.