ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ಕೋವಿಡ್-19 ಪಾಸಿಟಿವಿಟಿ ದರದ ಆಧಾರದ ಮೇಲೆ ಆರ್ಥಿಕ ಮತ್ತು ಇತರೆ ಚಟುವಟಿಕೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಂತೆಗಳನ್ನು ನಡೆಸಲು ಅನುಮತಿ ನೀಡಲಾಗಿರುತ್ತದೆ. ಅದರಂತೆ ವಾರದ ಸಂತೆಗಳನ್ನು ನಡೆಸುವಾಗ ಜನಜಂಗುಳಿ ಹೆಚ್ಚಾಗಿ ಉಂಟಾಗುವುದನ್ನು ನಿಯಂತ್ರಿಸುವ ಸಲುವಾಗಿ ವಿಶಾಲ ಪ್ರದೇಶಗಳಲ್ಲಿ ಸಂತೆಗಳನ್ನು ನಡೆಸುವಂತೆ ಜಿಲ್ಲಾಧಿಕಾರಿ ಕಚೇರಿಯಿಂದ ನಿರ್ದೇಶನ ನೀಡಲಾಗಿರುತ್ತದೆ.
ಆದರೆ ಜಿಲ್ಲೆಯಲ್ಲಿ ವಾರದ ಸಂತೆಗಳನ್ನು ತೀರ ಇಕ್ಕಟ್ಟಿನ ಸ್ಥಳಗಳಲ್ಲಿ ನಡೆಸುತ್ತಿರುವುದು ಕಂಡುಬಂದಿದ್ದು, ಇದರಿಂದಾಗಿ ಸಂತೆಗಳಲ್ಲಿ ಸಾಮಾನು ಖರೀದಿಸಲು ಬರುವ ಜನರು ಸೂಕ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದರಿಂದ ಕೋವಿಡ್-19 ರ ನಿಯಮಗಳು ಉಲ್ಲಂಘನೆಯಾಗುತ್ತಿದ್ದು, ಕೊರೋನಾ ಸೋಂಕು ಹರಡುವಿಕೆಯ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಆದುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಸಂತೆಗಳನ್ನು ನಡೆಸುವಾಗ ಸಾರ್ವಜನಿಕರ ನಡುವೆ ಸಾಮಾಜಿಕ ಅಂತರ ಹಾಗೂ ಇತರೆ ಕೋವಿಡ್-19 ಸಂಬಂಧಿತ ನಿಯಮಗಳು ಪಾಲನೆಯಾಗುವ ಬಗ್ಗೆ ನೋಡಿಕೊಳ್ಳಲು ನಗರಸಭೆಯ ಆಯುಕ್ತರು, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳ ಮುಖ್ಯಾಧಿಕಾರಿಗಳು, ಕೃಷಿ ಉತ್ಪನ್ನ ಮಾರುಕಟ್ಟೆಗಳ ಕಾರ್ಯದರ್ಶಿಗಳು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇವರುಗಳು ವಾರದ ಸಂತೆಗಳನ್ನು ಸಾಕಷ್ಟು ಸ್ಥಳಾವಕಾಶವಿರುವ ವಿಶಾಲ ಪ್ರದೇಶಗಳಲ್ಲಿ ನಡೆಸಲು ಕಡ್ಡಾಯವಾಗಿ ಕ್ರಮವಹಿಸಿ, ಸಂತೆಗಳಲ್ಲಿ ಕೋವಿಡ್-19 ಸಂಬಂಧಿತ ನಿಯಮಗಳಾದ ಮುಖಗವಸು ಧರಿಸುವುದು, ಕೈಗಳ ನೈರ್ಮಲ್ಯ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡಿರುವುದರ ಕುರಿತು ಹಾಗೂ ಸಾರ್ವಜನಿಕರು ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು.
ತಪ್ಪಿದಲ್ಲಿ ಅಥವಾ ಈ ನಿಯಮಗಳು ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟ ಆಯುಕ್ತರು, ಮುಖ್ಯಾಧಿಕಾರಿಗಳು, ಕೃಷಿ ಉತ್ಪನ್ನ ಮಾರುಕಟ್ಟೆಗಳ ಕಾರ್ಯದರ್ಶಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹೊಣೆಗಾರರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.