ಉಡುಪಿ: ಉಡುಪಿ ನಗರಸಭೆಯ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ ಆಸ್ಕರ್ ಫೆರ್ನಾಂಡಿಸ್‌ರವರು 1980ರಲ್ಲಿ ಲೋಕಸಭೆಯ ಪ್ರವೇಶದೊಂದಿಗೆ ಕೇಂದ್ರದಲ್ಲಿ ಗಾಂಧಿ ಕುಟುಂಬಕ್ಕೆ ಆಪ್ತರಾಗಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 1986ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 5 ಬಾರಿ ಲೋಕಸಭಾ ಸದಸ್ಯರಾಗಿ, 4 ಬಾರಿ ರಾಜ್ಯಸಭಾ ಸದಸ್ಯರಾಗಿ, ರಾಜೀವ್ ಗಾಂಧಿಯವರ ಸಂಸದೀಯ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಹೆದ್ದಾರಿ, ಅಂಕಿಅಂಶ ಅನುಷ್ಠಾನ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಉಡುಪಿ ಜಿಲ್ಲಾ ಕಾಂಗ್ರೆಸ್‌ಗೆ ಬೃಹತ್ ಕಾಂಗ್ರೆಸ್ ಭವನದ ಕೊಡುಗೆ ನೀಡಿ ಪಕ್ಷಕ್ಕೆ ಭದ್ರ ನೆಲೆಯನ್ನು ಒದಗಿಸಿಕೊಟ್ಟವರು ಆಸ್ಕರ್ ಫೆರ್ನಾಂಡಿಸ್‌ರವರು. ಕರಾವಳಿ ಭಾಗದ ಆಸ್ಕರ್ ರವರು ರಾಷ್ಟ್ರೀಯ ನಾಯಕರಾಗಿ ಬೆಳೆದು ಪಕ್ಷವನ್ನು ಮಾತೃಸ್ವರೂಪದಂತೆ ಕಂಡವರು. ಕಾಂಗ್ರೆಸ್ ವಲಯದಲ್ಲಿ ಅಜಾತಶತ್ರುವಾಗಿ ಬೆಳೆದ ಆಸ್ಕರ್‌ರವರ ನಿಧನದಿಂದಾಗಿ ದೇಶವು ಒಬ್ಬ ಸಹೃದಯಿ ರಾಜಕೀಯ ಮುಖಂಡನನ್ನು ಕಳೆದುಕೊಂಡಂತಾಗಿದೆ, ಅಲ್ಲದೆ ಉಡುಪಿ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿ, ಮಾರ್ಗದರ್ಶಕರಾಗಿದ್ದ ಅವರ ಅಗಲಿಕೆ ಜಿಲ್ಲೆಗೆ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರುಗಳಾದ ಗೋಪಾಲ ಪೂಜಾರಿ, ಯು.ಆರ್. ಸಭಾಪತಿ, ಮುಖಂಡರುಗಳಾದ ಎಂ.ಎ. ಗಫೂರ್, ದಿನೇಶ್ ಪುತ್ರನ್, ರಾಜು ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ಬಿ. ನರಸಿಂಹಮೂರ್ತಿ, ಭಾಸ್ಕರ್ ರಾವ್ ಕಿದಿಯೂರು, ಉದ್ಯಾವರ ನಾಗೇಶ್ ಕುಮಾರ್, ಕುಶಲ್ ಶೆಟ್ಟಿ, ಮುರಳಿ ಶೆಟ್ಟಿ, ಅಣ್ಣಯ್ಯ ಸೇರಿಗಾರ್, ಜನಾರ್ದನ ತೋನ್ಸೆ, ಕೀರ್ತಿ ಶೆಟ್ಟಿ, ನವೀನ್‌ಚಂದ್ರ ಜೆ. ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಾಳ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.