ಕೋವಿಡ್-19 ಎರಡನೇ ಅಲೆಯ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು 11 ವರ್ಗಗಳ ಅಸಂಘಟಿತ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲರ್‌ಗಳು, ಮೆಕ್ಯಾನಿಕ್, ಚಿಂದಿ ಆಯುವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕ ವೃತ್ತಿಯಲ್ಲಿ ತೊಡಗಿಸಿಕೊಂಡ ಕಾರ್ಮಿಕರಿಗೆ ತಲಾ 2,000 ರೂ. ಗಳ ಒಂದು ಬಾರಿಯ ನೆರವನ್ನು ಘೋಷಿಸಿ ಆದೇಶ ಹೊರಡಿಸಿದ್ದು, ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿರುತ್ತದೆ.
ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ. ಫಲಾನುಭವಿಗಳು ರಾಜ್ಯ ಸರ್ಕಾರದ ಸೇವಾಸಿಂಧು ತಂತ್ರಾಂಶದಲ್ಲಿ ನೇರವಾಗಿ ಅಥವಾ ಸಿಟಿಜನ್ ಲಾಗಿನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಉಚಿತವಾಗಿ, ಸೇವಾಸಿಂಧು ನಾಗರಿಕ ಸೇವಾ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ 25 ರೂ. ಸೇವಾ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಕೆಲವು ಸೇವಾ ಕೇಂದ್ರಗಳು ಮತ್ತು ಸೈಬರ್ ಸೆಂಟರ್‌ಗಳು 200 ರೂ. ಸೇವಾ ಶುಲ್ಕವನ್ನು ವಿಧಿಸಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಯಾವುದೇ ಸೇವಾ ಕೇಂದ್ರಗಳು ಸಿಗದಿತ ಸೇವಾ ಶುಲ್ಕವನ್ನು ಹೊರತುಪಡಿಸಿ, ಹೆಚ್ಚಿನ ಮೊತ್ತವನ್ನು ಪಡೆಯುವುದರ ಬಗ್ಗೆ ದೂರು ಬಂದರೆ ಅಂತಹ ಸೇವಾ ಕೇಂದ್ರಗಳ ಸಿ.ಎಸ್.ಸಿ ಐಡಿ ಹಾಗೂ ಸೇವಾಸಿಂಧು ಕಿಯೋಸ್ಕ್ ಐಡಿ ಡಿಆಕ್ಟಿವೇಟ್ ಮಾಡಿ ಅಂಗಡಿಯ ಪರವಾನಿಗೆಯನ್ನು ರದ್ದು ಮಾಡುವುದರ ಜೊತೆಗೆ ಮಾಲೀಕರ ವಿರುದ್ಧ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.