ಮಲ್ಪೆ: ಪ್ರಸ್ತುತ ಜಾಗತಿಕವಾಗಿ ಕಂಡುಬರುವ ಹಿಂಸಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆಯ ಪರಿಕಲ್ಪನೆ ಅಗತ್ಯವಾಗಿದೆ. ತಾನು ಚನ್ನಾಗಿ ಬದುಕಿ ಇತರರನ್ನೂ ಬದುಕಲು ಅವಕಾಶ ನೀಡುವ ಮನಸ್ಥಿತಿ ಬೆಳೆದಾಗ ಮಾತ್ರ ಉತ್ತಮ ಬದುಕುವ ವಾತಾವರಣ ನಿರ್ಮಾಣವಾಗಲು ಸಾಧ್ಯ. ಸಂವಿಧಾನದ ಅಶಯವಾದ ಶಾಂತಿ, ಸಹಬಾಳ್ವೆ ಹಾಗೂ ಸಮಾನತೆಯ ಚಿಂತನೆಗಳು ಇಂದಿನ ಯುವ ಸಮುದಾಯದಲ್ಲಿ ಬೆಳೆದಾಗ ಭವ್ಯ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್ ಹಾಗೂ ಸ್ಕೌಟ್ & ಗೈಡ್ಸ್ ಆಯೋಜಿಸಿದ್ದ ಸದ್ಭಾವನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು, ದೇಶದ ಏಕತೆ ಹಾಗೂ ಸಮಗ್ರತೆಗೆ ನಾಗರಿಕರ ಸೂಕ್ತ ನಡವಳಿಕೆ ಅಗತ್ಯ. ಭ್ರಾತೃತ್ವದ ಚಿಂತನೆಯು ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬಲ್ಲದು. ನನಗಿಂತ ದೇಶ ಹಿರಿದು ಎಂಬ ಧ್ಯೇಯದೊಂದಿಗೆ ಉತ್ತಮ ನಾಗರಿಕರಾದಾಗ ಸದ್ಭಾವನಾ ದಿನಾಚರಣೆಯ ನಿಜವಾದ ಉದ್ಧೇಶ ಸಾಕಾರವಾಗುತ್ತದೆ ಎಂದರು.
ಐ.ಕ್ಯೂ.ಎ.ಸಿ. ಸಂಚಾಲಕ ಡಾ. ಸುರೇಶ್ ರೈ ಕೆ. ಉಪಸ್ಥಿತರಿದ್ದರು. ಯೂತ್ ರೆಡ್ ಕ್ರಾಸ್‌ನ ಸಂಚಾಲಕ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಉದಯ ಶೆಟ್ಟಿ ಕೆ. ಸ್ವಾಗತಿಸಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ದಯಾನಂದ ಕುಮಾರ್ ವಂದಿಸಿದರು. ಅಶ್ವಿಜಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಥಿಗಳಿಗೆ ಸದ್ಭಾವನಾ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.