ಜಿಲ್ಲೆಯಾದ್ಯಂತ ಪರವಾನಿಗೆ ರಹಿತ, ವೇಳಾಪಟ್ಟಿ ರಹಿತ ಹಾಗೂ ಅಧ್ಯರ್ಪಣೆಯಿಂದ ಬಿಡುಗಡೆ ಹೊಂದದೇ ಇರುವ ವಾಹನಗಳು ರಸ್ತೆಯಲ್ಲಿ ಓಡಾಡುವುದು ಕಂಡುಬಂದಲ್ಲಿ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ ಗಂಗಾಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಾಸಗಿ ಬಸ್, ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಮ್ಯಾಕ್ಸಿಕ್ಯಾಬ್ ವಾಹನಗಳನ್ನು ಓಡಿಸುವ ಚಾಲಕರು ಹಾಗೂ ನಿರ್ವಾಹಕರು ಕೋವಿಡ್ ಲಸಿಕೆ ಪಡೆಯದೇ, ಮಾಸ್ಕ್ ಹಾಕಿಕೊಳ್ಳದೇ ಕರ್ತವ್ಯ ನಿರ್ವಹಿಸಿದ್ದಲ್ಲಿ ವಾಹನದ ಮಾಲೀಕರ ಮೇಲೆ ಹಾಗೂ ತತ್ಸಂಬಂಧ ನೌಕರರ ಮೇಲೆ ಕಟ್ಟುನಿಟ್ಟಿನ ಕೋವಿಡ್ 19 ರ ಜಾಗೃತ ಕ್ರಮವಾಗಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.
ರಾಜ್ಯ ಉಚ್ಛ ನ್ಯಾಯಾಲಯದ ಆದೇಶದನ್ವಯ ವಾಹನದ ನೋಂದಣಿ ಫಲಕದ ಮೇಲೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ/ ರಾಜ್ಯ/ ಜಿಲ್ಲಾ ಮಾನವ ಹಕ್ಕುಗಳ ಸಂಸ್ಥೆ/ ಒಕ್ಕೂಟ ಅಥವಾ ಹೆಸರುಗಳನ್ನು, ಚಿಹ್ನೆ/ ಲಾಂಛನಗಳನ್ನು ಹಾಗೂ ಇತರೆ ಸಂಘ ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಂಡಲ್ಲಿ ಕಡ್ಡಾಯವಾಗಿ ತೆರವುಗೊಳಿಸಬೇಕು.
ನೋಂದಣಿ ಫಲಕಕ್ಕೆ ಅಡಚಣೆಯಾಗದ ರೀತಿಯಲ್ಲಿ ಇಲಾಖೆ ಹಾಗೂ ಸಂಸ್ಥೆಗಳ ಹೆಸರುಗಳನ್ನು ನೋಂದಣಿ ಫಲಕದಿಂದ ತೆಗೆದುಹಾಕಿ, ನೋಂದಣಿ ಸಂಖ್ಯೆ ಫಲಕವನ್ನು ಮಾತ್ರ ವಾಹನಕ್ಕೆ ಅಳವಡಿಸಬೇಕು. ನೋಂದಣಿ ಫಲಕದಲ್ಲಿ ನ್ಯೂನ್ಯತೆಗಳು ಕಂಡುಬಂದಲ್ಲಿ ಕಾನೂನು ರೀತಿಯಲ್ಲಿ ದಂಡ ವಿಧಿಸಲಾಗುವುದು.
ಈಗಾಗಲೇ ಸಾರಿಗೆ ಕಚೇರಿಯಲ್ಲಿ 223 ಬಸ್‌ಗಳನ್ನು ಅದ್ಯರ್ಪಣದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.