ಕುಂದಾಪುರ: ಪಡಿ ಸಂಸ್ಥೆ ಮಂಗಳೂರು ಮತ್ತು ಪುರಸಭೆ ಕುಂದಾಪುರ ಇವರ ಆಶ್ರಯದಲ್ಲಿ ಪುರಸಭಾ ಚುನಾಯಿತ ಪ್ರತಿನಿಧಿಗಳಿಗೆ ಕುಂದಾಪುರ ಪುರಸಭೆಯ ಡಾ. ವಿ.ಎಸ್ ಆಚಾರ್ಯ ಭವನದಲ್ಲಿ ತರಬೇತಿ ಕಾರ್ಯಗಾರ ನಡೆಯಿತು. ಪುರಸಭೆ ಅಧ್ಯಕ್ಷರಾದ ವೀಣಾ ಭಾಸ್ಕರ್ ಮೆಂಡನ್, ಉಪಾಧ್ಯಕ್ಷರಾದ ಸಂದೀಪ್ ಖಾರ್ವಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ರಿ. ಉಡುಪಿ ಉಪಾಧ್ಯಕ್ಷೆ ತಿಲೋತ್ತಮ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಡಿ ಸಂಸ್ಥೆಯು ಸ್ಥಳೀಯ ಸರಕಾರಗಳಲ್ಲಿ ಶಿಕ್ಷಣ ಹಕ್ಕು ಕಾಯಿದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮೂರು ವರ್ಷದ ಯೋಜನೆಯನ್ನು ಹಾಕಿಕೊಂಡಿದ್ದು, ಈ ಕುರಿತಾಗಿ ಮೂರು ವರ್ಷದಲ್ಲಿ ಸ್ಥಳೀಯ ಸರಕಾರದ ಚುನಾಯಿತ ಸದಸ್ಯರಿಗೆ ನಾಲ್ಕು ಹಂತದ ತರಬೇತಿ ಮತ್ತು ಪರಿಶೀಲನ ಸಭೆ ಮತ್ತು ಆರು ತಿಂಗಳಿಗೊಮ್ಮೆ ಮೌಲ್ಯಮಾಪನವನ್ನು ಮಾಡುವುದು. ಈ ಕುರಿತಾಗಿ ಸ್ಥಳೀಯ ಸರಕಾರದ ಜವಾಬ್ದಾರಿ ಬಹಳ ಪ್ರಮುಖವಾಗಿದೆ ಎಂದು ಹೇಳಿದರು.
ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ ಸದಸ್ಯರಾದ ಪ್ರಮೀಳಾ ಜೆ ವಾಜ್ ಸಂಪನ್ಮೂಲ ವ್ಯಕ್ತಿಯಾಗಿ, ಸ್ಥಳೀಯ ಆಡಳಿತ ಮತ್ತು ಶಿಕ್ಷಣ ಹಕ್ಕು ಕಾಯಿದೆ-2009 ಮತ್ತು ಸ್ಥಳೀಯ ಸರಕಾರದ ಆಡಳಿತದಲ್ಲಿ ಮಕ್ಕಳು ಹಾಗೂ ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನ ಪ್ರಕ್ರಿಯೆಗಳ ಕುರಿತು ಪುರಸಭೆ ಸದಸ್ಯರಿಗೆ ಗುಂಪು ಚಟುವಟಿಕೆಯ ಮೂಲಕ ತರಬೇತಿಯನ್ನು ನೀಡಿದರು. ಪುರಸಭೆ ಅಧ್ಯಕ್ಷರು ಮತ್ತು ಸದಸ್ಯರು ಮುಂದಿನ ಮೂರು-ಆರು ತಿಂಗಳಿಗೆ ಶಿಕ್ಷಣ ಹಕ್ಕು ಕಾಯಿದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಗೊಳಿಸಿದರು.
ತಿಲೋತ್ತಮ ನಾಯಕ್ ಸ್ವಾಗತಿಸಿ, ಪಡಿ ಸಂಸ್ಥೆಯ ಉಡುಪಿ ಜಿಲ್ಲಾ ಸಂಯೋಜಕ ವಿವೇಕ್ ವಂದಿಸಿದರು.