ಸಾಣೂರು: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಸಂಘಟನೆ ಉಡುಪಿ ಇದರ ಮಾರ್ಗದರ್ಶನದಂತೆ ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಹಾಗೂ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ.) ನಂದಳಿಕೆ ಅಬ್ಬನಡ್ಕ ಇವರ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಯುವಕ ಮಂಡಲ (ರಿ.) ಸಾಣೂರು ಇದರ ಪಠೇಲ್ ಮುದ್ದಣ್ಣ ಶೆಟ್ಟಿ ಸ್ಮಾರಕ ಜ್ಯೋತಿ ಕಲಾ ಮಂಟಪದಲ್ಲಿ ಕಾರ್ಕಳ ತಾಲೂಕಿನ 75 ಸಂಘ ಸಂಸ್ಥೆಗಳ ಸುಮಾರು 300 ಸದಸ್ಯರ ಉಪಸ್ಥಿತಿಯಲ್ಲಿ ಯುವ ಮಂಡಲ ಅಭಿವೃದ್ಧಿ ಅಭಿಯಾನ – 2022 ಇಂದು ನಡೆಯಿತು.
ಅಭಿಯಾನವನ್ನು ಪ್ರಗತಿಪರ ಕೃಷಿಕರು ಯುವಕ ಮಂಡಲದ ಪ್ರಧಾನ ಮಹಾ ಪೋಷಕ ಸದಸ್ಯರಾದ ಶಂಕರ್ ಶೆಟ್ಟಿ ಕೆಳಗಿನಬಾವ ಉದ್ಘಾಟಿಸಿದರು. ಗ್ರಾಮಾಭಿವೃದ್ಧಿಯಲ್ಲಿ ಯುವಕ ಮಂಡಲಗಳ ಪಾತ್ರ ಎಂಬ ವಿಷಯದಲ್ಲಿ ಮುಖ್ಯ ಉಪನ್ಯಾಸಕರಾಗಿ ಕೆ.ಎಂ.ಎಫ್ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ಮಾತನಾಡಿ, ಯುವಕರ ಉತ್ಸಾಹಕ್ಕೆ ಪೂರಕವಾಗಿ ಅವಕಾಶಗಳನ್ನು ಒದಗಿಸಿದಾಗ ನಿಜವಾದ ಅರ್ಥದಲ್ಲಿ ಗ್ರಾಮಾಭಿವೃದ್ಧಿ ಸಾಧ್ಯವಾಗುತ್ತದೆ.
ಶೇ. 46 ಯುವ ಶಕ್ತಿಯನ್ನು ಹೊಂದಿರುವ ಭಾರತದಲ್ಲಿ ಯುವಜನತೆಗೆ ಸರಿಯಾದ ಮಾರ್ಗದರ್ಶನ ನೀಡುವ ಕೆಲಸಗಳು ಸಂಘಸಂಸ್ಥೆಗಳ ಮೂಲಕ ನಡೆದಾಗ ಒಂದು ಗ್ರಾಮಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸುಲಭಸಾಧ್ಯ ಎಂದರು.
ನೆಹರು ಯುವ ಕೇಂದ್ರ ಸಂಘಟನೆಯ ಉಡುಪಿ ಜಿಲ್ಲಾ ಯುವಜನ ಅಧಿಕಾರಿ ವಿಲ್ಫ್ರೆಡ್ ಡಿಸೋಜ, ನೆಹರು ಯುವ ಕೇಂದ್ರದಿಂದ ಸಂಘ ಸಂಸ್ಥೆಗಳಿಗೆ ಸಿಗುವ ಸೌಲಭ್ಯಗಳನ್ನು ತಿಳಿಸಿ ಸಂಘಗಳು ನೋಂದಾವಣೆಗೊಳಿಸಲು ಮುಂದಾಗಬೇಕೆಂದು ತಿಳಿಸಿದರು.
ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಕಳ ತಾಲೂಕಿನ ಆಯ್ದ 16 ಸಂಘಗಳಿಗೆ ಕ್ರೀಡಾ ಸಲಕರಣೆ ವಿತರಿಸಲಾಯಿತು.
ಸಾಣೂರು ಯುವಕ ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಸುರೇಶ್ ಪೂಜಾರಿ ವಂದಿಸಿದರು.