ಕಾರ್ಕಳ: ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣಗಳನ್ನು ಒಗ್ಗೂಡಿಸಿಕೊಂಡಾಗ ತಮ್ಮ ಮುಂದಿನ ಔದ್ಯೋಗಿಕ ರಂಗದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಆಳ್ವಾಸ್ ಕಾಲೇಜ್ ಮೂಡುಬಿದ್ರೆ ಇಲ್ಲಿಯ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸವಿತಾ ಸುವರ್ಣ ಹೇಳಿದರು.
ಅವರು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇದರ ಐಕ್ಯೂಎಸಿ, ವಾಣಿಜ್ಯ ಮತ್ತು ವ್ಯವಹಾರ ಸಂಘ, ಕೆರಿಯರ್ ಗೈಡೆನ್ಸ್ ಮತ್ತು ಪ್ಲೇಸ್ಮೆಂಟ್ಸ್ ಸೆಲ್ ಹಾಗೂ ಆಳ್ವಾಸ್ ಕಾಲೇಜು ಮೂಡುಬಿದರೆ ಇದರ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಾಯಕತ್ವ ಮತ್ತು ವೃತ್ತಿ ಮಾರ್ಗದರ್ಶನದ ಬಗ್ಗೆ ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕಿರಣ್ ಎಂ ಅವರು ಮಾತನಾಡಿ, ನಾಯಕತ್ವ ಮತ್ತು ವೃತ್ತಿಜೀವನಕ್ಕೆ ಒಂದಕ್ಕೊಂದು ಸಂಬಂಧವಿದ್ದು ವೃತ್ತಿಯನ್ನು, ಆಯ್ದುಕೊಳ್ಳುವಾಗ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿ ಅವರವರ ಕೌಶಲ್ಯಕ್ಕೆ ಸರಿ ಹೊಂದುವ ವೃತ್ತಿಯನ್ನೇ ಆಯ್ದುಕೊಳ್ಳಬೇಕು ಎಂದರು.
ಆಳ್ವಾಸ್ ಕಾಲೇಜು ಮೂಡುಬಿದರೆ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಾದ ಪುನೀತ್ ಹಾಗೂ ಚೈತನ್ಯ ನಾಯಕತ್ವ ಕುರಿತಾದ ಮಾಹಿತಿಯನ್ನು ನೀಡಿದರು. ಕೆರಿಯರ್ ಗೈಡೆನ್ಸ್ ಮತ್ತು ಪ್ಲೇಸ್ಮೆಂಟ್ಸ್ ಸೆಲ್ ಸಂಚಾಲಕರಾದ ನವೀನ್ ಹಾಗೂ ಮೈತ್ರಿ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ವಿದ್ಯಾಧರ್ ಹೆಗಡೆ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತç ಸಂಘದ ಸಂಚಾಲಕರಾದ ಡಾ. ಸುಬ್ರಹ್ಮಣ್ಯ ಕೆ. ಸಿ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಷ್ಮಾ ರಾವ್ ಕೆ ವಂದಿಸಿದರು. ಚೈತ್ರಾ ಕುಡ್ವಾ ಅತಿಥಿಗಳನ್ನು ಪರಿಚಯಿಸಿದರು. ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕರಾದ ಡಾ. ಗಣೇಶ್ ಎಸ್, ಪ್ರಸನ್ನಕುಮಾರ್, ರಾಮಮೂರ್ತಿ ಮುಂತಾದವರು ಉಪಸ್ಥಿತರಿದ್ದರು.