ಕಾರ್ಕಳ: ವಿದ್ಯಾರ್ಥಿಗಳು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅರಿವು ಮೂಡಲು ಎನ್ನೆಸ್ಸೆಸ್ ತನ್ನದೇ ಆದ ರೀತಿಯಲ್ಲಿ ಸಹಕಾರಿಯಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿಯ ಪ್ರಾಂಶುಪಾಲರಾದ ಡಾ. ಪ್ರಸಾದ್ ರಾವ್ ಹೇಳಿದರು.
ಅವರು ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಚಟುವಟಿಕೆಗಳ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡುತ್ತಾ, ನಾನು ನನ್ನದು ಎಂಬ ಸ್ವಾರ್ಥ ಮನೋಭಾವ ಎಲ್ಲೆಡೆ ಮನೆಮಾಡಿರುವಾಗ ಶೈಕ್ಷಣಿಕ ಜೀವನದ ಎನ್ನೆಸ್ಸೆಸ್ ಸಹಬಾಳ್ವೆ, ‘ನನಗಲ್ಲ ನಿನಗೆ’ ಎಂಬ ಕಲ್ಪನೆ ಕೊಟ್ಟು ಶ್ರಮದ ಮಹತ್ವ ತಿಳಿಸಿಕೊಡುತ್ತದೆ.
ಸೇವಾ ಮನೋಭಾವನೆಯಿರುವವರಿಗೆ ಬೆಲೆಯೂ, ಬಲವೂ ಬರುತ್ತದೆ ಎಂದು ಎನ್ನೆಸ್ಸೆಸ್ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಎಂ. ಕೊಡವೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಸಾಹಿತ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಬಂಡಿ, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಲೆಯ ಉಪ ಪ್ರಾಂಶುಪಾಲರಾದ ವಾಣಿ ಕೆ. ಉಪಸ್ಥಿತರಿದ್ದರು.
ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ರವಿ ಜಿ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಎನ್ನೆಸ್ಸೆಸ್ ವಿದ್ಯಾರ್ಥಿ ನಾಯಕ ಪ್ರಸನ್ನ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪನ್ಯಾಸಕ ಸಂತೋಷ್ ನೆಲ್ಲಿಕಾರು ಕಾರ್ಯಕ್ರಮ ನಿರೂಪಿಸಿ, ಎನ್ನೆಸ್ಸೆಸ್ ವಿದ್ಯಾರ್ಥಿ ನಾಯಕಿ ಸ್ವಾತಿ ವಂದಿಸಿದರು.