ಗಣಿತನಗರ: ಇಡೀ ವಿಶ್ವವೇ ಭಾರತದ ಕಡೆ ತಿರುಗುವಂತೆ ಮಾಡಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಬದುಕಿದ್ದು ಮೂವತ್ತೊಂಬತ್ತು ವರ್ಷವಾದರೂ, ಅವರು ಮನುಕುಲಕ್ಕೆ ನೀಡಿದ ಸಂದೇಶ ಸಾರ್ವಕಾಲಿಕವಾದುದು ಎಂದು ಮುನಿರಾಜ ರೆಂಜಾಳ ಹೇಳಿದರು.
ಅವರು ಗಣಿತನಗರದ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಪ್ರಾರಂಭಗೊಂಡ ಮಾಸಿಕ ಕಾರ್ಯಕ್ರಮ ಸರಣಿ ಮಾಲಿಕೆ “ಮೌಲ್ಯ ಸುಧಾ”ವನ್ನು ಉದ್ಘಾಟಿಸಿ, ‘ಸ್ವಾಮಿ ವಿವೇಕಾನಂದರ ಜೀವನಾದರ್ಶಗಳು’ ಎಂಬ ವಿಷಯದ ಕುರಿತಂತೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ರಾಷ್ಟ್ರಪಿತ ಗಾಂಧೀಜಿ ಕೂಡಾ ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾಗಿದ್ದಲ್ಲದೆ, ಅವರ ‘ಪುಸ್ತಕಗಳನ್ನು ಓದಿ ತನ್ನ ದೇಶಪ್ರೇಮವು ಇಮ್ಮಡಿಗೊಂಡಿತು’ ಎಂದು ಹೇಳಿಕೊಂಡಿದ್ದರು, ಮುಂದೆ ಗಾಂಧೀ ವಿಶ್ವಮಟ್ಟದ ನಾಯಕನಾಗಿ ಬೆಳೆದುದರ ಹಿಂದೆ ವಿವೇಕಾನಂದರ ಜೀವನಾದರ್ಶಗಳು ಪ್ರಭಾವ ಬೀರಿದೆ ಎಂದರು.
ಇದೇ ಸಂದರ್ಭ ವಿವೇಕಾನಂದರ ವಿವಿಧ ವ್ಯಕ್ತಿತ್ವಗಳನ್ನು ನಿದರ್ಶನ ಸಹಿತ ಪ್ರಸ್ತುತಪಡಿಸಿದರು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ, ನಮ್ಮ ಮಕ್ಕಳು ತಂದೆ-ತಾಯಿಯನ್ನು, ಸಮಾಜವನ್ನು ಗೌರವಿಸಿಕೊಂಡು ಮೌಲ್ಯಾಧಾರಿತ ಜೀವನ ನಡೆಸಿಕೊಂಡು ಬರಬೇಕೆಂಬ ಸದಾಶಯದೊಂದಿಗೆ ‘ಮೌಲ್ಯಸುಧಾ’ವನ್ನು ರೂಪಿಸಲಾಗಿದ್ದು, ಸಂಸ್ಕೃತಿ, ಸಂಸ್ಕಾರ, ಸದ್ವಿಚಾರದಡಿ ತಿಂಗಳಿಗೊಂದರಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಗೂ ಮುಕ್ತ ಅವಕಾಶವಿದೆ ಎಂದರು.
ಇದೇ ಸಂದರ್ಭ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತರಾದ ಮುನಿರಾಜ ರೆಂಜಾಳರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎ.ಪಿ.ಜಿ.ಇ.ಟಿ ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್ ಹೆಗ್ಡೆ, ಶ್ರೀ ಮಹಾಗಣಪತಿ ಭಜನಾ ಮಂಡಳಿ ಅಧ್ಯಕ್ಷ ಕಮಲಾಕ್ಷ ನಾಯಕ್, ಕಾರ್ಕಳ ಜ್ಞಾನಸುಧಾ ಪಿಯು ಪ್ರಾಂಶುಪಾಲ ದಿನೇಶ್ ಎಂ.ಕೊಡವೂರ್, ಉಡುಪಿ ಜ್ಞಾನಸುಧಾ ಪಿಯು ಪ್ರಾಂಶುಪಾಲ ಗಣೇಶ್ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲೆ ಉಷಾ ರಾವ್ ಯು ಉಪಸ್ಥಿತರಿದ್ದರು. ಉಪನ್ಯಾಸಕ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.