ಉಡುಪಿ: ಶಿಸ್ತುಬದ್ಧವಾದ ಯೋಗಾಭ್ಯಾಸದಿಂದ ಫಲದಾಯಕ ಪ್ರಾಣಾಯಾಮ, ಅಂತಹ ಸತತ ಪ್ರಾಣಾಯಾಮದಿಂದ ಫಲಪ್ರದ ಧ್ಯಾನಸ್ಥ ಸ್ಥಿತಿ ಪ್ರಾಪ್ತವಾಗುತ್ತದೆ ಎಂದು ಯೋಗ ಶಿಕ್ಷಕ, ಯೋಗಾರಾಧಕ ಮಂಜುನಾಥ ಭಟ್ ಅಭಿಪ್ರಾಯಪಟ್ಟರು.
ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ ಆಯೋಜಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗದ ಮಹತ್ವ ಹಾಗೂ ಯೋಗದ ಬಗ್ಗೆ ಮಾತುಕತೆ ಸಮಾರಂಭದಲ್ಲಿ ಮಾತನಾಡುತ್ತಾ ಯೋಗಾಭ್ಯಾಸದೊಂದಿಗೆ ಅದಕ್ಕೆ ಪೂರಕವಾದ ಆಹಾರ ಸೇವನೆ ಮತ್ತು ಮಾನಸಿಕ ಸ್ಥಿತಿಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಫಲತೆಯನ್ನು ಪಡೆಯಬಹುದು ಎಂದು ತಿಳಿಸಿದರು.
ಮುಖ್ಯ ಅತಿಥಿ, ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡುತ್ತಾ ಯೋಗದಲ್ಲಿ ರಾಜ ಯೋಗ, ಕರ್ಮ ಯೋಗ, ಜ್ಞಾನಯೋಗ, ಭಕ್ತಿಯೋಗ, ಹೀಗೆ ವಿವಿಧ ವಿಧಾನಗಳಿದ್ದು ಯೋಗಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ದೊರೆಯಲು ಕಾರಣರಾದ ಪ್ರಧಾನ ಮಂತ್ರಿಯನ್ನು ನೆನಪಿಸಿಕೊಂಡರು. ಸ್ವಸ್ಥ ಶರೀರಕ್ಕೆ, ಸ್ವಸ್ಥ ಸಮಾಜಕ್ಕೆ ಯೋಗದ ಅವಶ್ಯಕತೆ ಇದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕೊರೆಯ, ಕಾರ್ಯಕ್ರಮ ಸಂಚಾಲಕ ಸುಕೇಶ್ ಕೆ. ಅಮೀನ್, ಪೂರ್ವಾಧ್ಯಕ್ಷ ಪ್ರಕಾಶ್ ಕೊಡಂಕೂರು, ಸುರಭಿ ರತನ್, ಸಂತೋಷ್ ಕೊರಂಗ್ರಪಾಡಿ, ದಯಾನಂದ ನಿಟ್ಟೂರ್, ಪ್ರಜ್ವಲ್ ಕಟಪಾಡಿ, ಉದಯ ನಾಯ್ಕ ಉಪಸ್ಥಿತರಿದ್ದರು. ಪೂರ್ಣಿಮಾ ಜನಾರ್ದನ್ ಮಾನಪತ್ರ ವಾಚಿಸಿದರು. ಎಸ್.ಕೆ.ಪಿ.ಎ ಉಡುಪಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿ, ಕೋಶಾಧ್ಯಕ್ಷ ದಿವಾಕರ ಹಿರಿಯಡ್ಕ ವಂದಿಸಿದರು.