ಕೋಟ: ಉದ್ಯೋಗಾವಕಾಶಗಳು ನಮ್ಮ ದೇಶದಲ್ಲಿ ವಿಪುಲವಾಗಿದ್ದರೂ ಸಾಮರ್ಥ್ಯದ ಕೊರತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವಲ್ಲಿ ಹಿನ್ನಡೆಯಾಗುತ್ತಿದೆ ಎಂಬ ಅಂಶವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಮೂಲಕ ಉತ್ತಮ ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳು ಸ್ವಯಂ ಪ್ರಯತ್ನದಿಂದ ತಮ್ಮ ಆತ್ಮವಿಶ್ವಾಸ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಎಕ್ಸ್ಪಟ್ರೋನ್ ಕಂಪೆನಿಯ ತರಬೇತುದಾರರಾದ ಡಾ. ರೋಹಿತ್ ರೆಡ್ಡಿ ಕರೆ ನೀಡಿದರು.
ಕೋಟ-ಪಡುಕೆರೆಯ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಮಾಹಿತಿ ಕೋಶ ಮತ್ತು ಎಕ್ಸ್ಪರ್ಟ್ಟ್ರೋನ್ ಕಂಪೆನಿ ಸಹಭಾಗಿತ್ವದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಯಶಸ್ವಿಯಾಗಿ ಪಡೆದುಕೊಳ್ಳಲು ಅಗತ್ಯವಾದ ಕೌಶಲ್ಯಗಳಿಗೆ ಸಂಬಂಧಿಸಿದ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರದಲ್ಲಿ ಎಕ್ಸ್ಪಟ್ರೋನ್ ಕಂಪೆನಿಯ ಪಾಲುದಾರರಾದ ದಿನೇಶ್ ಅಡಿಗ, ಕುಂದಾಪುರ ಜ್ಞಾನಜ್ಯೋತಿ ಅಕಾಡೆಮಿಯ ಮಾಲೀಕರಾದ ಸತ್ಯನಾರಾಯಣ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಿತ್ಯಾನಂದ ವಿ ಗಾಂವಕರ ವಹಿಸಿದ್ದರು.
ಇತಿಹಾಸ ವಿಭಾಗದ ಮುಖ್ಯಸ್ಥರಾದ ರಾಜಣ್ಣ ಎಂ ಕಾರ್ಯಕ್ರಮ ನಿರೂಪಿಸಿದರು. ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ಸುಬ್ರಹ್ಮಣ್ಯ ಎ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಐ.ಕ್ಯೂ.ಎ.ಸಿ ಸಹ ಸಂಚಾಲಕರಾದ ಮನೋಹರ್ ಬಿ ವಂದಿಸಿದರು.