ಉದ್ಯಾವರ: ಸಕಾಲದಲ್ಲಿ ಪೌಷ್ಠಿಕಾಂಶ ಆಹಾರ ಸೇವನೆ, ವಯಸ್ಸಿಗೆ ತಕ್ಕಂತೆ ನಿದ್ದೆ, ವಿರೋಧಾಭಾಸ ಮಾತುಗಳ ಬಗ್ಗೆ ಎಚ್ಚರಿಕೆ, ಪ್ರತಿದಿನ ಮನೆಯ ಮಕ್ಕಳೊಂದಿಗೆ ಇರಲು ನಿರ್ದಿಷ್ಠ ಸಮಯ ನಿಗದಿಪಡಿಸುವುದು, ಸಮಾಜದ ಇತರರೊಂದಿಗೆ ಸಕಾರಾತ್ಮಕ ವರ್ತನೆ, ಯಾವುದೇ ಕಾರಣಕ್ಕೂ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವಾಗ ಪಲಾಯನವಾದವಾಗದಂತೆ ನೋಡಿಕೊಳ್ಳುವುದು ಇವೇ ಮೊದಲಾದ ಉದಾತ್ತ ನಡವಳಿಕೆಗಳು ಹೆತ್ತವರಲ್ಲಿ ಮಾತ್ರವಲ್ಲ ತಮ್ಮ ಮಕ್ಕಳಲ್ಲೂ ಅದು ಅನುಕರಣೆಯಾಗುವಂತೆ ನೋಡಿಕೊಂಡಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಉಡುಪಿ ಕುತ್ಪಾಡಿಯ ಎಸ್ ಡಿ ಎಮ್ ಕಾಲೇಜಿನ ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಯೋಗೀಶ್ ಆಚಾರ್ಯ ಹೇಳಿದರು.
ಅವರು ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ೨೦೨೨-೨೩ನೇ ಸಾಲಿನ ಪ್ರಥಮ ವಾರ್ಷಿಕ ಮಹಾಸಭೆಯಲ್ಲಿ ಶಾಲಾ ವಿದ್ಯಾರ್ಥಿಗಳ ಹೆತ್ತವರನ್ನು ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಡಾ| ತ್ರಿವೇಣಿ ವೇಣುಗೋಪಾಲ್ ವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕ ವಿಕ್ರಮ್ ಆಚಾರ್ಯ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ಕಾರಂತ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಲಾ ಸಂಚಾಲಕ ಸುರೇಶ್ ಶೆಣೈ, ಶಾಲಾ ಆಡಳಿತ ಮಂಡಳಿಯ ಸದಸ್ಯ ಕೃಷ್ಣಕುಮಾರ್ ರಾವ್ ಮಟ್ಟು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ್ ಕುಮಾರ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ರಾಜೀವಿ ಉಮೇಶ್ ಕರ್ಕೇರಾ, ಕೋಶಾಧಿಕಾರಿ ಅಶ್ವಿನಿ ದೇವೇಂದ್ರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಪ್ರಮೀಳಾ ವಂದಿಸಿದರು.